ಅನಂತಪುರ(ಆಂಧ್ರಪ್ರದೇಶ) : ಕಳೆದ ಕೆಲ ದಿನಗಳ ಹಿಂದೆ ಆಂಧ್ರಪ್ರದೇಶ ಕ್ಯಾಬಿನೆಟ್ ಪುನರ್ ರಚನೆಯಾಗಿದೆ. ಕೆಲವೊಂದು ಹೊಸ ಮುಖಗಳಿಗೆ ಜಗನ್ ಮೋಹನ್ ರೆಡ್ಡಿ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಈ ಸಾಲಿನಲ್ಲಿ ಶಾಸಕಿ ಉಷಾ ಶ್ರೀಚರಣ್ ಸಹ ಸೇರಿಕೊಂಡಿದ್ದು, ನೂತನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಸಚಿವೆಯಾಗಿ ಆಯ್ಕೆಯಾಗುತ್ತಿದ್ದಂತೆ ವಿಜಯ ಯಾತ್ರೆ ನಡೆಸಿದ್ದು, ಈ ವೇಳೆ ಟ್ರಾಫಿಕ್ ಜಾಮ್ನಿಂದಾಗಿ 8 ತಿಂಗಳ ಮಗುವೊಂದು ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿ ಆಯ್ಕೆಯಾಗಿರುವ ಉಷಾ ಶ್ರೀಚರಣ್, ರಸ್ತೆಯಲ್ಲಿ ವಿಜಯ್ ಯಾತ್ರೆ ನಡೆಸುತ್ತಿದ್ದರು.
ಇದನ್ನೂ ಓದಿ: ಪಂಜಾಬ್ನ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್.. ಕೊಟ್ಟ ಮಾತು ಉಳಿಸಿಕೊಂಡ ಸಿಎಂ
ಈ ವೇಳೆ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಪೊಲೀಸರು ಟ್ರಾಫಿಕ್ ನಿಯಂತ್ರಣ ಮಾಡಲು ವಿಫಲವಾಗಿರುವ ಕಾರಣ ಈ ಘಟನೆ ನಡೆದಿದೆ.
ನಡೆದಿದ್ದೇನು? : ಅನಂತಪುರ ಜಿಲ್ಲೆಯ ಶೆಟ್ಟೂರು ಮಂಡಲದ ಚೆರ್ಲೋಪಲ್ಲಿ ಗ್ರಾಮದ ಗಣೇಶ್ ಮತ್ತು ಪತ್ನಿ ಈರಕ್ಕ ಎಂಬ ದಂಪತಿ ತಮ್ಮ ಮಗು ಅನಾರೋಗ್ಯದಿಂದ ಬಳಲುತ್ತಿತ್ತು. ಹೀಗಾಗಿ, ಕಲ್ಯಾಣದುರ್ಗ ಟೌನ್ನಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿತ್ತು. ಅವರು ತೆರಳುತ್ತಿದ್ದ ರಸ್ತೆಯಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ ಉಂಟಾಗಿರುವ ಕಾರಣ ವೇವಾಗಿ ತೆರಳಲು ಸಾಧ್ಯವಾಗಿಲ್ಲ.
ಹೀಗಾಗಿ, ಮಗು ದಾರಿ ಮಧ್ಯೆ ಸಾವನ್ನಪ್ಪಿದೆ. ಇದರ ಬೆನ್ನಲ್ಲೇ ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದಿಂದಲೇ ತಮ್ಮ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಈ ವೇಳೆ ಅವರನ್ನ ಪೊಲೀಸರು ಚದುರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂಥೆ ತೆಲುಗು ದೇಶಂ ಪಾರ್ಟಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸೇರಿದಂತೆ ಇತರೆ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.