ಚೆನ್ನೈ (ತಮಿಳುನಾಡು): ತಮಿಳುನಾಡಿನಲ್ಲಿ ಇಬ್ಬರು ಬಡ ರೈತರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯೊಬ್ಬರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ಚೆನ್ನೈನ ಜಿಎಸ್‌ಟಿ-ಸಿಇ ಉಪ ಆಯುಕ್ತ ಬಿ.ಬಾಲ ಮುರುಗನ್ ಮಂಗಳವಾರ ರಾಷ್ಟ್ರಪತಿಗಳಿಗೆ ಈ ಪತ್ರ ಬರೆದಿದ್ದು, ಬಿಜೆಪಿ ನಾಯಕರೊಂದಿಗಿನ ಕಾನೂನು ವಿವಾದದ ಬಳಿಕ ಜಾರಿ ನಿರ್ದೇಶನಾಲಯವು ಇಬ್ಬರು ಬಡ ದಲಿತ ರೈತರಿಗೆ ಸಮನ್ಸ್ ನೀಡಿದೆ. ಇದು ರಾಜ್ಯದಲ್ಲಿ ಬಿಜೆಪಿಯನ್ನು ವಿಸ್ತರಿಸಲು ಕೇಂದ್ರ ಸಂಸ್ಥೆಯನ್ನು ಅಸ್ತ್ರವಾಗಿ ಬಳಸಿರುವ ಮಾರ್ಗ ಎಂದು ಆರೋಪಿಸಿದ್ದಾರೆ.
''ತಮಿಳುನಾಡಿನ ಇಬ್ಬರು ಹಿರಿಯ ಅನಕ್ಷರಸ್ಥ ಮತ್ತು ಬಡ ದಲಿತ ರೈತರಾದ 72 ವರ್ಷದ ಕನ್ನಯ್ಯನ್ ಮತ್ತು 67 ವರ್ಷದ ಕೃಷ್ಣನ್ ಸೇಲಂ ಜಿಲ್ಲೆಯ ಅತ್ತೂರಿನಲ್ಲಿ 6.5 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇವರು ಪ್ರಸ್ತುತ ಬಿಜೆಪಿಯ ಸೇಲಂ ಪೂರ್ವ ಜಿಲ್ಲಾ ಕಾರ್ಯದರ್ಶಿ ಗುಣಶೇಖರ್ ಎಂಬುವರೊಂದಿಗೆ ಕಾನೂನು ವಿವಾದದಲ್ಲಿ ತೊಡಗಿದ್ದಾರೆ. ಇದೀಗ ಈ ರೈತರು ಜಾರಿ ನಿರ್ದೇಶನಾಲಯದ ಸಮನ್ಸ್ ಸ್ವೀಕರಿಸಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಅಕ್ರಮ ಭೂ ಕಬಳಿಕೆಗೆ ಯತ್ನಿಸಿದ್ದಾರೆ ಎಂದು ರೈತರು ಆರೋಪಿಸಿರುವ ಭೂ ವಿವಾದ ಪ್ರಕರಣದಲ್ಲಿ ಇಡಿ ಪ್ರವೇಶಿಸಿರುವುದು ಕುತೂಹಲ ಕೆರಳಿಸಿದೆ. ಸಮನ್ಸ್ ಲಕೋಟೆಯಲ್ಲಿ ರೈತರ ಜಾತಿಯನ್ನು 'ಹಿಂದೂ ಪಲ್ಲರು' ಎಂದು ನಮೂದಿಸಿರುವ ಆಕ್ರೋಶಕ್ಕೆ ಕಾರಣವಾಗಿದೆ'' ಎಂದು ಮುರುಗನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪತ್ರದ ಪ್ರತಿ 'ಈಟಿವಿ ಭಾರತ್'ಗೆ ಲಭ್ಯವಾಗಿದೆ.
''ಸೇಲಂ ಜಿಲ್ಲೆಯ ಅತ್ತೂರ್ ಪ್ರದೇಶದ ರಾಮನಾಯಕನಪಾಳ್ಯಂ ಗ್ರಾಮದ ಕನ್ನಯ್ಯನ್ ಮತ್ತು ಕೃಷ್ಣನ್ ಇಬ್ಬರೂ ಸಹೋದರರಾಗಿದ್ದಾರೆ. ಜಮೀನಿನ ಸಮಸ್ಯೆಯಿಂದ ರೈತರಿಗೆ ಕಳೆದ ನಾಲ್ಕು ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ 450 ರೂ. ಇದೆ. ತಮ್ಮ ಜೀವನೋಪಾಯಕ್ಕಾಗಿ 1,000 ರೂಪಾಯಿಗಳ ವೃದ್ಧಾಪ್ಯ ಪಿಂಚಣಿ ಮತ್ತು ಸರ್ಕಾರ ಒದಗಿಸುವ ಉಚಿತ ಪಡಿತರವನ್ನು ಅವಲಂಬಿಸಿದ್ದಾರೆ'' ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇಡಿ ಅಧಿಕಾರಿಗಳಿಂದ ಬೆದರಿಕೆ ಆರೋಪ: "ಇಡಿ ಸಹಾಯಕ ನಿರ್ದೇಶಕ ರಿತೇಶ್ ಕುಮಾರ್ ರೈತರಿಗೆ 2023ರ ಜೂನ್ 26ರಂದು ಸಮನ್ಸ್ ಕೊಟ್ಟಿದ್ದಾರೆ. ಸಮನ್ಸ್ ಪ್ರಕಾರ, ತನಿಖಾಧಿಕಾರಿ (ಐಒ) ರಿತೇಶ್ ಕುಮಾರ್ 2002ರ ಮನಿ ಲಾಂಡರಿಂಗ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. 2023ರ ಜುಲೈ 5ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ಕನ್ನಯ್ಯನ್ ಮತ್ತು ಕೃಷ್ಣನ್ ಅವರಿಗೆ ಸೂಚಿಸಲಾಗಿತ್ತು. ಅಂತೆಯೇ, ಚೆನ್ನೈನ ಶಾಸ್ತ್ರಿ ಭವನದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದಾಗ ಅಲ್ಲಿನ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ'' ಎಂದೂ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಧಿಕಾರಿಯ ಪತ್ರದ ಪ್ರಕಾರ, ''ಇಬ್ಬರು ರೈತ ಸಹೋದರರು ತಮ್ಮ ಭೂಮಿಯನ್ನು ಬಿಜೆಪಿ ನಾಯಕ ಗುಣಶೇಖರ್ ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೃಷ್ಣನ್ ನೀಡಿದ ದೂರಿನ ಮೇರೆಗೆ 2020ರಲ್ಲಿ ಗುಣಶೇಖರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಇದರಿಂದ ಗುಣಶೇಖರ್ ಬಂಧನವಾಗಿ ನ್ಯಾಯಾಂಗ ಬಂಧನಕ್ಕೂ ಒಳಗಾಗಿದ್ದರು. ಕೃಷ್ಣನ್ ಮತ್ತು ಗುಣಶೇಖರ್ ನಡುವೆ ನಡೆಯುತ್ತಿರುವ ಭೂ ವಿವಾದದ ಸಿವಿಲ್ ಪ್ರಕರಣವು ಪ್ರಸ್ತುತ ಅತ್ತೂರು ನ್ಯಾಯಾಲಯದಲ್ಲಿದೆ'' ಎಂದು ಹೇಳಿದ್ದಾರೆ.
'ಬಿಜೆಪಿ ಪೊಲೀಸ್ ಜಾರಿ ನಿರ್ದೇಶನಾಲಯ': ಮುಂದುವರೆದು, ''ಈ ಮೇಲಿನ ಘಟನೆಯು ತನಿಖಾ ಸಂಸ್ಥೆಯಾದ ಇಡಿ ಬಿಜೆಪಿಯ ವಿಸ್ತೃತ ಭಾಗವಾಗಿದೆ ಎಂಬುದನ್ನು ತೋರಿಸುತ್ತದೆ. ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಜಾರಿ ನಿರ್ದೇಶನಾಲಯವನ್ನು 'ಬಿಜೆಪಿ ಪೊಲೀಸ್ ಜಾರಿ ನಿರ್ದೇಶನಾಲಯ'ವಾಗಿ ಯಶಸ್ವಿಯಾಗಿ ಪರಿವರ್ತಿಸಿದ್ದಾರೆ" ಎಂಬ ಗಂಭೀರ ಆರೋಪವನ್ನೂ ಅಧಿಕಾರಿ ಪತ್ರದ ಮೂಲಕ ಮಾಡಿದ್ದಾರೆ.
ಅಲ್ಲದೇ, ಈ ಪತ್ರದಲ್ಲಿ ತಮ್ಮ ಬಗ್ಗೆಯೂ ಉಲ್ಲೇಖಿಸಿರುವ ಅಧಿಕಾರಿ, ''ನಮ್ಮದು ಕೃಷಿಕ ಕುಟುಂಬ. ನನ್ನ ತಂದೆ ವೈದ್ಯನಾಗಿದ್ದರೂ, ನಾವು ಇತರ ಉದ್ಯೋಗಗಳಿಗಿಂತ ಪ್ರತಿಷ್ಠಿತವೆಂದು ಪರಿಗಣಿಸುವ ಕೃಷಿಯನ್ನು ಮಾಡುತ್ತಿದ್ದೇವೆ. ನಾನು ಸರ್ಕಾರಿ ಸೇವೆಗೆ ಸೇರುವ ಮೊದಲು ನಮ್ಮ ಪೂರ್ವಜರ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೆ. ನಿವೃತ್ತಿಯ ನಂತರವೂ ನಾನು ಕೃಷಿ ಮಾಡುತ್ತೇನೆ'' ಎಂದು ಹೇಳಿಕೊಂಡಿದ್ದಾರೆ.
''ನನ್ನ 30 ವರ್ಷಗಳ ಸೇವಾವಧಿಯಲ್ಲಿ ಯಾವೊಬ್ಬ ರಾಜಕಾರಣಿಯೂ ಯಾವುದೇ ಅನುಕೂಲಕ್ಕಾಗಿ ಒತ್ತಡ ಹೇರಿರುವುದನ್ನು ನೋಡಿಲ್ಲ. ಸಾಮಾನ್ಯವಾಗಿ ಅವರು ದೆಹಲಿಯ ಮೂಲಕ ಪ್ರಭಾವವನ್ನು ತರುತ್ತಾರೆ. ಮೇಲಿನ ಘಟನೆಯಿಂದ ಈಗ ಪರಿಸ್ಥಿತಿ ಬದಲಾಗಿದೆ. ಈ ಸ್ಥಿತಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇರ ಹೊಣೆಯಾಗುತ್ತಾರೆ. ನಿರ್ಮಲಾ ಹಣಕಾಸು ಸಚಿವರಾಗಲು ಅನರ್ಹರಾಗಿದ್ದಾರೆ. ಹಣಕಾಸು ಸಚಿವರನ್ನು ತಕ್ಷಣವೇ ವಜಾಗೊಳಿಸುವಂತೆ ರಾಷ್ಟ್ರಪತಿಗಳಿಗೆ ನಾನು ವಿನಂತಿಸುತ್ತೇನೆ. ಬಡ ದಲಿತ ರೈತರಿಗೆ ನ್ಯಾಯವನ್ನು ಒದಗಿಸಿ, ಜಾರಿ ನಿರ್ದೇಶನಾಲಯವನ್ನು ಉಳಿಸಿ''ಎಂದು ತಮ್ಮ ಪತ್ರದ ಮೂಲಕ ಮನವಿ ಮಾಡಿದ್ದಾರೆ.
'ಈಟಿವಿ ಭಾರತ್' ಜೊತೆ ಮುರುಗನ್ ಮಾತು: ಈ ಕುರಿತು 'ಈಟಿವಿ ಭಾರತ್'ಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಬಾಲ ಮುರುಗನ್, ''ಹಿಂದೆ ಇಡಿಯಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಲಾಗುತ್ತಿತ್ತು. ಅಲ್ಲದೇ, ನಮಗೆ ರಾಜಕೀಯ ಮುಖಂಡರ ಹಸ್ತಕ್ಷೇಪವೂ ಇರಲಿಲ್ಲ. ಪ್ರಸ್ತುತ ಬಡ ದಲಿತ ರೈತರಾದ ಕನ್ನಯ್ಯನ್, ಕೃಷ್ಣನ್ 6.5 ಎಕರೆ ಜಮೀನು ಹೊಂದಿದ್ದು, ಕಳೆದ 4 ವರ್ಷಗಳಿಂದ ಆ ಜಮೀನಿನಲ್ಲಿ ಕೃಷಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಬಿಜೆಪಿ ಕಾರ್ಯಕಾರಿಣಿ ಗುಣಶೇಖರನ್ ಕಾರಣ ಎಂದು ಸಹೋದರರು ದೂರುತ್ತಿದ್ದಾರೆ. ಈ ಭೂಮಿ ವಿವಾದಕ್ಕೆ ಇಡಿ ಸಮನ್ಸ್ ನೀಡಿರುವ ರೀತಿ ಸರಿಯಿಲ್ಲ. ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾದ ನಂತರವೇ ಇಂತಹ ಘಟನೆಗಳು ನಡೆಯುತ್ತಿವೆ'' ಎಂದು ದೂರಿದರು.
ಇದನ್ನೂ ಓದಿ: ತಮಿಳುನಾಡು: ₹ 20,140 ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ