ಕೋಲ್ಕತ್ತಾ( ಪಶ್ಚಿಮಬಂಗಾಳ) : ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪ ಮೇಲೆ ಸಚಿವ ಜ್ಯೋತಿಪ್ರಿಯ ಮಲಿಕ್ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ ಏಕಾಏಕಿ ಕೇಂದ್ರ ಭದ್ರತಾ ಪಡೆಗಳೊಂದಿಗೆ ಸಚಿವರ ಲೇಕ್ ಸಾಲ್ಟ್ನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು, ಶೋಧ ಕಾರ್ಯ ನಡೆಸಿದ್ದಾರೆ. ಇಡಿ ದಾಳಿ ವೇಳೆ ಮಾಜಿ ಆಹಾರ ಸಚಿವ, ಹಾಲಿ ಅರಣ್ಯ ಸಚಿವ ಜ್ಯೋತಿಪ್ರಿಯ ಮಲಿಕ್ ಅವರು ಮನೆಯಲ್ಲೇ ಇದ್ದರು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆಯಿಂದಲೇ ಇಡಿ ಅಧಿಕಾರಿಗಳು ಸಚಿವರ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇಡಿ ಮಾಹಿತಿ ಪ್ರಕಾರ, ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಎಸಗಿರುವ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಈ ಹಿಂದೆ ಬಾಕಿಬುರ್ ರೆಹಮಾನ್ ಅವರನ್ನು ಇಡಿ ಬಂಧಿಸಿತ್ತು. ರೆಹಮಾನ್ ವಿಚಾರಣೆ ವೇಳೆ ಸಚಿವ ಜ್ಯೋತಿಪ್ರಿಯ ಮಲಿಕ್ ಹೆಸರು ಕೇಳಿಬಂದಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಇಡಿ ಅಧಿಕಾರಿಗೆ ಸಚಿವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಸಾಲ್ಟ್ ಲೇಕ್ನ ಬಿ ಬ್ಲಾಕ್ನಲ್ಲಿರುವ ಸಚಿವರ ಎರಡು ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಚಿವರ ಮನೆಯಲ್ಲಿ ಶೋಧ ಕಾರ್ಯ ಮುಂದುವರೆದಿದೆ.
ಇಡಿ ಅಧಿಕಾರಿಗಳು ಪಡಿತರ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಚಿವ ಜ್ಯೋತಿ ಪ್ರಿಯ ಮಲಿಕ್ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಧಿಕಾರಿಗಳು ನಗರಪಾಲಿಕೆ ನೇಮಕಾತಿ ಹಗರಣದ ವಿಚಾರಣೆ ನಡೆಸುವ ವೇಳೆ ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಇದರ ಜೊತೆಗೆ ಸಚಿವರ ಆಪ್ತ ಅಮಿತ್ ದೆ ಅವರ ಫ್ಲಾಟ್ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಮಿತ್ ಅವರು ಡಂಡಂ ನಗೇರ್ಬಜಾರ್ನಲ್ಲಿರುವ ಫ್ಲಾಟ್ವೊಂದರಲ್ಲಿ ವಾಸಿಸುತ್ತಿದ್ದು, ಅಧಿಕಾರಿಗಳು ದಾಳಿ ನಡೆಸಿದ ವೇಳೆ ಫ್ಲಾಟ್ಗೆ ಬೀಗ ಹಾಕಿತ್ತು ಎಂದು ತಿಳಿದು ಬಂದಿದೆ. ಇದರ ಜೊತೆಗೆ ಇಡಿ ಅಧಿಕಾರಿಗಳು ಪಡಿತರ ವಿತರಣೆಯಲ್ಲಿ ಅಕ್ರಮ ಎಸಗಿರುವ ಸಂಬಂಧ ರಾಜ್ಯದ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಇನ್ನೊಂದೆಡೆ, ನಗರಪಾಲಿಕೆ ನೇಮಕಾತಿ ಪ್ರಕರಣದಲ್ಲಿ ಅಕ್ರಮ ಎಸಗಿರುವ ಆರೋಪ ಸಂಬಂಧ ಸಿಬಿಐ ಅಧಿಕಾರಿಗಳು ವಿವಿದೆಡೆ ದಾಳಿ ನಡೆಸಿದ್ದಾರೆ. ಈ ವೇಳೆ ಸಚಿವ ಫಿರ್ಹಾದ್ ಹಕೀಮ್ ಹಾಗೂ ಕಮರ್ಹತಿ ಶಾಸಕ ಮದನ್ ಮಿತ್ರಾ ಅವರ ಮನೆ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ₹200 ಕೋಟಿ ಮೌಲ್ಯದ ಔಷಧ ಕಳ್ಳಸಾಗಣೆ ಪ್ರಕರಣ: ಮುಂಬೈನ 9 ಕಡೆ ಇಡಿ ದಾಳಿ