ನವದೆಹಲಿ : ಪಂಜಾಬ್ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವ ಮುನ್ನ ಜಾರಿ ನಿರ್ದೇಶನಾಲಯ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜೈನ್ ಅವರ ನಿವಾಸದ ಮೇಲೆ ಈ ಹಿಂದೆ ಎರಡು ಬಾರಿ ದಾಳಿ ನಡೆಸಿತ್ತು. ಆದರೆ, ಏನೂ ಸಿಕ್ಕಿರಲಿಲ್ಲ. ಇಡಿ ಮತ್ತೆ ದಾಳಿ ಮಾಡಲು ಬಯಸುವುದಾದ್ರೆ, ಅವರಿಗೆ ಸ್ವಾಗತ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಚುರುಕುಗೊಂಡಿವೆ ಎಂದು ಕೇಜ್ರಿವಾಲ್ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ:ಎರಡನೇ ಬಾರಿ ಕೊರೊನಾಗೆ ತುತ್ತಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕೇಜ್ರಿವಾಲ್, ಬಿಜೆಪಿಗೆ ಯಾವಾಗ ಚುನಾವಣೆಯಲ್ಲಿ ಸೋಲುವ ಭೀತಿ ಕಾಡುತ್ತದೆಯೋ, ಆಗ ಅದು ತನ್ನ ಎಲ್ಲಾ ಏಜೆನ್ಸಿಗಳಿಗೆ ಕೆಲಸವನ್ನು ಕೊಡುತ್ತದೆ. ಆದ್ದರಿಂದ ದಾಳಿಗಳು ನಡೆಯುತ್ತವೆ ಮತ್ತು ಬಂಧನಗಳೂ ಆಗುತ್ತವೆ.
ನಮಗೆ ಯಾವುದೇ ಭಯವಿಲ್ಲ. ಏಕೆಂದರೆ, ನಾವು ಸತ್ಯದ ಹಾದಿಯಲ್ಲಿ ನಡೆದಾಗ ಈ ಎಲ್ಲಾ ಅಡೆತಡೆಗಳು ಬರುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಸಿಬಿಐ ಮತ್ತು ಆದಾಯ ತೆರಿಗೆಯಂತಹ ಇತರ ಏಜೆನ್ಸಿಗಳನ್ನು ಸಹ ಕಳುಹಿಸಲು ಬಯಸಿದರೆ, ಅದು ಕಳುಹಿಸಬಹುದು. ಸತ್ಯೇಂದ್ರ ಜೈನ್ ಅಲ್ಲದೇ ಬೇರೆಯವರನ್ನೂ ಬಂಧಿಸಿ, ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ಯಾರಿಗೂ ಹೆದರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಈ ಹಿಂದೆ ನಮ್ಮ 21 ಶಾಸಕರನ್ನು ಬಂಧಿಸಲಾಗಿತ್ತು. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿದರೆ ಏನಾಗಬಹುದು? ಐದರಿಂದ 10 ದಿನಗಳಲ್ಲಿ ಜಾಮೀನು ಸಿಗಲಿದೆ. ನಾವು ಚನ್ನಿ ಜೀಯಂತೆ ಕೊರಗುವುದಿಲ್ಲ, ಚನ್ನಿಜಿಯಂತೆ ಸಿಟ್ಟು ಮಾಡಿಕೊಳ್ಳುವುದಿಲ್ಲ, ನಾವೇನೂ ತಪ್ಪು ಮಾಡಿಲ್ಲ. ಹಾಗಾಗಿ, ಭಯವಿಲ್ಲ ಎಂದು ಹೇಳಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ