ತಿರುವನಂತಪುರ: ವಿಚಾರಣೆಗೆ ಹಾಜರಾಗುವಂತೆ ರಾಜ್ಯದ ಹಿರಿಯ ಸಿಪಿಐ (ಎಂ) ನಾಯಕ ಥಾಮಸ್ ಐಸಾಕ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿದೆ. ಈ ಹಿಂದಿನ ಎಲ್ಡಿಎಫ್ ಸರ್ಕಾರದಲ್ಲಿ ಅವರು ಹಣಕಾಸು ಸಚಿವರಾಗಿದ್ದಾಗ, ಕೆಐಐಎಫ್ಬಿ (KIIFB - KERALA INFRASTRUCTURE INVESTMENT FUND) ಹಣಕಾಸು ವ್ಯವಹಾರಗಳಲ್ಲಿ ಅಕ್ರಮಗಳು ನಡೆದಿರುವ ಆರೋಪಗಳ ಸಂಬಂಧದಲ್ಲಿ ಈ ನೋಟಿಸ್ ಜಾರಿ ಮಾಡಲಾಗಿದೆ. ಕೇರಳದಲ್ಲಿ ಆಡಳಿತಾರೂಢ ಸಿಪಿಐ (ಎಂ) ಪಕ್ಷದ ಒಡೆತನದಲ್ಲಿರುವ ದೃಶ್ಯ ಮಾಧ್ಯಮದ ವರದಿಯ ಪ್ರಕಾರ, ಥಾಮಸ್ ಐಸಾಕ್ ಅವರು ಆಗಸ್ಟ್ 11 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿದೆ.
ಇದಕ್ಕೂ ಮುನ್ನ, ಜುಲೈ 19 ರಂದು ತನ್ನ ಮುಂದೆ ಹಾಜರಾಗುವಂತೆ ತಿಳಿಸಿ ಇಡಿ ಕಳೆದ ತಿಂಗಳು ಐಸಾಕ್ ಅವರಿಗೆ ನೋಟಿಸ್ ನೀಡಿತ್ತು. ಆದಾಗ್ಯೂ, ಅವರು ತನಿಖಾ ಸಂಸ್ಥೆಯ ಮುಂದೆ ಹಾಜರಾಗಲಿಲ್ಲ. ಪಕ್ಷದ ತರಬೇತಿ ಶಿಬಿರಗಳಿಗೆ ಹೋಗುವ ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ನಂತರ, ತನಗೆ ಇಡಿ ನೋಟಿಸ್ ನೀಡಿದ್ದು ಕೇಂದ್ರದ ಬಿಜೆಪಿ ಸರ್ಕಾರದ 'ರಾಜಕೀಯ ತಂತ್ರ' ಎಂದು ಬಣ್ಣಿಸಿದ್ದರು. ಅಲ್ಲದೆ ಕೇಂದ್ರ ಸರ್ಕಾರವು ತನ್ನ ರಾಜಕೀಯ ಲಾಭಕ್ಕಾಗಿ ಎಲ್ಲ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಇಡಿ, ಸಿಎಜಿ ಮತ್ತು ಆದಾಯ ತೆರಿಗೆ ಇಲಾಖೆ ಕೂಡ ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿಯ ಬೆನ್ನು ಹತ್ತಿವೆ ಎಂದು ಕಳೆದ ವಿಧಾನಸಭೆ ಚುನಾವಣೆಗೂ ಮುನ್ನವೇ ಅವರು ಹೇಳಿದ್ದರು.
"ಕೆಐಐಎಫ್ಬಿ ಬೃಹತ್ ಮತ್ತು ನಿರ್ಣಾಯಕ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸುವ ರಾಜ್ಯ ಸರ್ಕಾರದ ಪ್ರಾಥಮಿಕ ಸಂಸ್ಥೆಯಾಗಿದೆ. ಕಳೆದ ವರ್ಷ ತನ್ನ ಪ್ರಥಮ ಮಸಾಲಾ ಬಾಂಡ್ ವಿತರಣೆಯ ಮೂಲಕ 50,000 ಕೋಟಿ ರೂ.ಗಳನ್ನು ಸಂಗ್ರಹಿಸುವ ಯೋಜನೆಯ ಭಾಗವಾಗಿ 2,150 ಕೋಟಿ ರೂ.ಗಳನ್ನು ಇದು ಸಂಗ್ರಹಿಸಿತ್ತು." ಎಂದು ಇಡಿ ಪ್ರಥಮ ಬಾರಿಗೆ ನೋಟಿಸ್ ನೀಡಿದಾಗ ಐಸಾಕ್ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದಿದ್ದರು. ಅಲ್ಲದೆ ಕೇರಳದಲ್ಲಿ ಕೆಐಐಎಫ್ಬಿ ಯಿಂದ ಉಂಟಾಗುತ್ತಿರುವ ಸಕಾರಾತ್ಮಕ ಬೆಳವಣಿಗೆಗಳ ಬಗ್ಗೆಯೂ ಅವರು ವಿವರವಾಗಿ ಬರೆದಿದ್ದರು.
ಇದನ್ನು ಓದಿ: ಮರಣ ಪ್ರಮಾಣ ಪತ್ರ ಪಡೆದು ಆಸ್ತಿ ಕಬಳಿಸಿದ ಸಂಬಂಧಿಕರು.. ನ್ಯಾಯಕ್ಕಾಗಿ ಜಿಲ್ಲಾಡಳಿತಕ್ಕೆ ಮೊರೆ ಹೋದ ಯುವಕ