ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ವಿಚಾರಣೆ ಮುಂದೂಡುವಂತೆ ಮನವಿ ಮಾಡಿಕೊಂಡಿದ್ದರು. ಇದನ್ನು ಮನ್ನಿಸಿದ ಇಡಿ ಅವರಿಗೆ ವಿನಾಯಿತಿ ನೀಡಿತ್ತು.
ಆದರೆ, ಜುಲೈ ಮಧ್ಯದ ವೇಳೆಗೆ ತನಿಖೆಗೆ ಹಾಜರಾಗುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ಹೊಸದಾಗಿ ಸಮನ್ಸ್ ಜಾರಿ ಮಾಡಿದೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಅನಾರೋಗ್ಯದ ಕುರಿತು ಬುಧವಾರ ಇಡಿಗೆ ಪತ್ರ ಬರೆದಿದ್ದರು. ಸೋನಿಯಾ ಗಾಂಧಿ ಅವರ ಮನವಿ ಪುರಸ್ಕರಿಸಿದ್ದ ಇಡಿ, ಈಗ ಹೊಸ ಸಮನ್ಸ್ ಜಾರಿ ಮಾಡಿದೆ.
ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋನಿಯಾ ಗಾಂಧಿ ಸೋಮವಾರ ಡಿಸ್ಚಾರ್ಜ್ ಆಗಿ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಜೂನ್ 12 ರಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಿಗೆ ರಕ್ತಸ್ರಾವವಾದ ನಂತರ ಜೂನ್ 12 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 2 ರಂದು ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು.
ಸೋನಿಯಾ ಗಾಂಧಿ ಅವರು ಈ ಹಿಂದೆ ಜೂನ್ 8 ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ನಿರ್ಧರಿಸಿದ್ದರು. ಆದರೆ, ಅವರ ಕೋವಿಡ್ ಸೋಂಕಿನ ದೃಷ್ಟಿಯಿಂದ ತನಿಖಾ ಸಂಸ್ಥೆಯಿಂದ ಹೆಚ್ಚಿನ ಸಮಯ ಕೋರಿದ್ದರು. ನಂತರ ಏಜೆನ್ಸಿ ಹೊಸದಾಗಿ ಸಮನ್ಸ್ ಜಾರಿ ಮಾಡಿ ಜೂನ್ 23 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಆದರೆ, ಅವರ ಆರೋಗ್ಯದಲ್ಲಿ ಇನ್ನೂ ಚೇತರಿಕೆ ಕಾಣದ ಹಿನ್ನೆಲೆ ಹಾಗೂ ವಿಶ್ರಾಂತಿಯ ಅವಶ್ಯಕತೆ ಹಿನ್ನೆಲೆಯಲ್ಲಿ ಅವರು ವಿಚಾರಣೆಗೆ ಹಾಜರಾಗಲು ಸಾಧ್ಯ ಇಲ್ಲ ಎಂದು ಇಡಿಗೆ ಮನವಿ ಮಾಡಿದ್ದರು.
ಈ ನಡುವೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಇಡಿ ಸತತ 51 ಗಂಟೆಗಳ ಕಾಲ ವಿಚಾರಣೆ ನಡೆಸಿ, ನ್ಯಾಷನಲ್ ಹೆರಾಲ್ಡ್ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಲಾಗಿದೆ. ಕೋಲ್ಕತ್ತಾ ಮೂಲದ ಡೋಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ಮಾಡಿಕೊಂಡ ಕೆಲವು ವಹಿವಾಟುಗಳ ಬಗ್ಗೆ ರಾಹುಲ್ ಅವರನ್ನು ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಕಾಂಗ್ರೆಸ್ ಇಡಿ ನಿಲುವು ಹಾಗೂ ಕೇಂದ್ರದ ನೀತಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನು ಓದಿ:ನ್ಯಾಷನಲ್ ಹೆರಾಲ್ಡ್: ಕೆಲವು ವಾರ ವಿಚಾರಣೆ ಮುಂದೂಡುವಂತೆ EDಗೆ ಸೋನಿಯಾ ಮನವಿ