ನವದೆಹಲಿ/ಗಾಜಿಯಾಬಾದ್: ರಸ್ತೆ ಬದಿಯಲ್ಲಿ ಸಿಕ್ಕಿದ ಅಂದಾಜು 25 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ಅನ್ನು ಆಟೋ ಚಾಲಕರೊಬ್ಬರು ಪೊಲೀಸರಿಗೆ ತಂದೊಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಚಾಲಕನ ಬಗ್ಗೆ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿ, ಸನ್ಮಾನಿಸಿ ಗೌರವಿಸಿದ್ದಾರೆ.
ಇದನ್ನೂ ಓದಿ: 8 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ
ಇಲ್ಲಿನ ಕಿದ್ವಾಯಿ ನಗರದ ನಿವಾಸಿ, ಇ-ರಿಕ್ಷಾ ಚಾಲಕ ಆಸ್ ಮೊಹಮ್ಮದ್ ಎಂಬುವರು ಮಂಗಳವಾರ ಮೋದಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಆಟೋದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ತಿಬ್ರಾ ರಸ್ತೆ ಬಳಿಯ ಕೊಳದ ದಡದಲ್ಲಿ ಬ್ಯಾಗ್‌ವೊಂದು ಅನಾಥವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಅಷ್ಟರಲ್ಲಿ ಪರಿಚಿತ ಸರ್ಫರಾಜ್ ಅಲಿ ಇದೇ ರಸ್ತೆಯಲ್ಲಿ ಹೋಗುತ್ತಿರುವುದನ್ನೂ ಗಮನಿಸಿದ್ದಾರೆ.
ನಂತರ ಇಬ್ಬರೂ ಸೇರಿಕೊಂಡು ಈ ಬ್ಯಾಗ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಮೋದಿ ನಗರ ಠಾಣೆಗೆ ತೆಗೆದುಕೊಂಡು ಬಂದಿದ್ದಾರೆ. ಪೊಲೀಸರು ಬ್ಯಾಗ್ ತೆರೆದು ನೋಡಿದಾಗ 25 ಲಕ್ಷ ರೂಪಾಯಿ ಮೌಲ್ಯದ 500 ನೋಟುಗಳ 50 ಬಂಡಲ್ಗಳು ಪತ್ತೆಯಾಗಿವೆ. ಇಷ್ಟೊಂದು ದೊಡ್ಡ ಮೊತ್ತದ ಹಣ ತುಂಬಿದ್ದ ಬ್ಯಾಗ್ ತಂದೊಪ್ಪಿಸಿದ ಚಾಲಕನ ಪ್ರಾಮಾಣಿಕತೆ ಮೆಚ್ಚಿ ಗಾಜಿಯಾಬಾದ್ ಗ್ರಾಮಾಂತರ ಡಿಸಿಪಿ ರವಿಕುಮಾರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿದ್ದಾರೆ.
ಚಾಲಕ ಮೊಹಮ್ಮದ್ ಮಾತನಾಡಿ, "ಈ ಬ್ಯಾಗ್ ಅನ್ನು ಮೊದಲು ಗಮನಿಸಿದಾಗ ಯಾರಾದರೂ ಬಾಂಬ್ ಇಟ್ಟಿದ್ದರೇನೋ ಎಂಬ ಅನುಮಾನ ಮೂಡಿತು. ಆದರೆ, ನಂತರ ತೆರೆದಾಗ ಹಣದ ಕಂತೆಗಳು ಕಾಣಿಸಿಕೊಂಡವು. ಮಾಲೀಕರ ಪತ್ತೆಗೆ ಯತ್ನಿಸಿದೆ. ಯಾರೂ ಕಾಣಿಸಲಿಲ್ಲ. ಹೀಗಾಗಿ ಆಟೋದಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಬಿಟ್ಟ ನಂತರ ನನ್ನ ಗೆಳೆಯನ ಬಳಿಗೆ ಹೋಗಿದ್ದು, ಆತ ಪೊಲೀಸರಿಗೆ ಮಾಹಿತಿ ನೀಡೋಣ ಎಂದು ತಿಳಿಸಿದ. ಅದರಂತೆ, ಪೊಲೀಸರಿಗೆ ಒಪ್ಪಿಸಿದೆವು. ನಾನು ಬಡ ಕುಟುಂಬಕ್ಕೆ ಸೇರಿದ ವ್ಯಕ್ತಿ. ಹಣದ ಮೌಲ್ಯ ಗೊತ್ತಿದೆ. ಇಷ್ಟೊಂದು ಹಣ ಕಳೆದುಕೊಂಡವರ ನೋವು ಕೂಡ ನನಗೆ ಅರ್ಥವಾಗುತ್ತದೆ" ಎಂದು ಹೇಳಿದರು.
ಬ್ಯಾಗ್ ಮಾಲೀಕರ ಸುಳಿವಿಲ್ಲ: "25 ಲಕ್ಷ ರೂ ತುಂಬಿದ್ದ ಬ್ಯಾಗ್ ಮಾಲೀಕರು ಯಾರೆಂದು ಇನ್ನೂ ಗೊತ್ತಾಗಿಲ್ಲ. ಬ್ಯಾಗ್ನ ವಾರಸುದಾರರು ಯಾರೂ ಪೊಲೀಸರನ್ನು ಸಂಪರ್ಕಿಸಿಲ್ಲ. ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದಾಯ ತೆರಿಗೆ ಇಲಾಖೆಗೂ ವಿಷಯ ತಿಳಿಸಲಾಗಿದೆ. ನಮ್ಮ ಸಿಬ್ಬಂದಿ ಕೂಡ ತನಿಖೆ ನಡೆಸುತ್ತಿದ್ದಾರೆ" ಎಂದು ಡಿಸಿಪಿ ರವಿಕುಮಾರ್ ಹೇಳಿದರು.
ಇದನ್ನೂ ಓದಿ: ಯುಎಸ್ ಪ್ರಜೆ ಮರೆತುಹೋದ ಪಾಸ್‌ಪೋರ್ಟ್, ದಾಖಲೆ ಪತ್ರ ಹಿಂದಿರುಗಿಸಿದ ಆಟೋ ಚಾಲಕನಿಗೆ ಸನ್ಮಾನ
ಇಂಥದ್ದೇ ನಿದರ್ಶನಗಳು..: ಈ ಹಿಂದೆಯೂ ಕೂಡ ಅನೇಕ ಕಡೆಗಳಲ್ಲಿ ಇದೇ ರೀತಿಯಾಗಿ ತಮ್ಮ ವಾಹನದಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ ಹಣ, ಚಿನ್ನಾಭರಣ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆಗಳಿವೆ. ಇದೇ ಜನವರಿ 25ರಂದು ಶಿವಮೊಗ್ಗದಲ್ಲಿ ಆಟೋ ಚಾಲಕ ನಾಗರಾಜ್ 8 ಸಾವಿರಕ್ಕೂ ಹೆಚ್ಚು ಹಣವಿದ್ದ ಬ್ಯಾಗ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದರು. ಜ.12ರಂದು ಬೆಂಗಳೂರಿನಲ್ಲಿ ಅಮೆರಿಕ ಪ್ರಜೆಗೆ ಸೇರಿದ ಪಾಸ್‌ಪೋರ್ಟ್, ವೀಸಾ ಇದ್ದ ಪರ್ಸ್ ಅನ್ನು ಆಟೋ ಚಾಲಕ ಕಿಶೋರ್ ಪೊಲೀಸರ ಮೂಲಕ ವಾರಸುದಾರರಿಗೆ ಮರಳಿಸಿದ್ದರು.
ಇದನ್ನೂ ಓದಿ: ಠಾಣೆಗೆ ಬಂದು ಹಣವಿದ್ದ ಬ್ಯಾಗ್ ವಾರಸುದಾರರಿಗೆ ಒಪ್ಪಿಸಿದ ಆಟೋ ಚಾಲಕ: ಪ್ರಾಮಾಣಿಕತೆಗೆ ಮೆಚ್ಚುಗೆ