ಭೋಪಾಲ್ (ಮಧ್ಯಪ್ರದೇಶ) : ಕುಟುಂಬ ರಾಜಕಾರಣ ಯಾವುದೇ ರಾಜ್ಯಕ್ಕೂ ಹೊರತಾಗಿಲ್ಲ. ಮಧ್ಯಪ್ರದೇಶದ ವಿಧಾನಸಭಾ ಚುನಾವಣಾ ಕಣದಲ್ಲಿ 8 ಮಾಜಿ ಮುಖ್ಯಮಂತ್ರಿಗಳ ಪುತ್ರರು, ಪುತ್ರಿಯರು ಸೇರಿದಂತೆ 10 ಸಂಬಂಧಿಕರು ಸ್ಪರ್ಧಿಸಿದ್ದಾರೆ. ಇದರಲ್ಲಿ ಬಿಜೆಪಿಯ 6 ಮಂದಿ ಇದ್ದರೆ, ಕಾಂಗ್ರೆಸ್ನಿಂದ ನಾಲ್ವರು ಚುನಾವಣೆ ಎದುರಿಸಲಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳ 10 ನೇರ ಸಂಬಂಧಿಕರು ಕಣದಲ್ಲಿದ್ದಾರೆ. ಇವರ ಪೈಕಿ ಐವರು ಅಭ್ಯರ್ಥಿಗಳು ಮಾಜಿ ಸಿಎಂಗಳ ಪುತ್ರರು, ಇಬ್ಬರು ಸೋದರಳಿಯರು, ಸಹೋದರ, ಮೊಮ್ಮಗ ಮತ್ತು ಸೊಸೆ ಇದ್ದಾರೆ.
ರಾಜ್ಯದ 6ನೇ ಮುಖ್ಯಮಂತ್ರಿ ಗೋವಿಂದ್ ನಾರಾಯಣ ಸಿಂಗ್ ಅವರ ಪುತ್ರ ಧ್ರುವ ನಾರಾಯಣ ಸಿಂಗ್ ಮತ್ತು ಮೊಮ್ಮಗ ವಿಕ್ರಮ್ ಸಿಂಗ್ ಅವರು ಕ್ರಮವಾಗಿ ಭೋಪಾಲ್‌ನ ಮಧ್ಯ ವಿಧಾನಸಭಾ ಕ್ಷೇತ್ರದಿಂದ ಮತ್ತು ಸತ್ನಾ ಜಿಲ್ಲೆಯ ರಾಂಪುರ- ಬಘೇಲನ್ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. 11 ನೇ ಮುಖ್ಯಮಂತ್ರಿಯಾದ ವೀರೇಂದ್ರ ಕುಮಾರ್ ಸಖ್ಲೇಚಾ ಅವರ ಪುತ್ರ ಓಂ ಪ್ರಕಾಶ್ ಸಖ್ಲೇಚಾ ಅವರು ನೀಮಚ್ ಜಿಲ್ಲೆಯ ಜವಾದ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಹುರಿಯಾಳಾಗಿದ್ದಾರೆ. ಪ್ರಸ್ತುತ ಅವರು ಬಿಜೆಪಿ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿದ್ದಾರೆ.
12 ನೇ ಸಿಎಂ ಸುಂದರ್ ಲಾಲ್ ಪಟ್ವಾ ಅವರ ಸೋದರಳಿಯ ಸುರೇಂದ್ರ ಪಟ್ವಾ ಅವರು ರೈಸನ್ ಜಿಲ್ಲೆಯ ಭೋಜ್‌ಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. 22 ನೇ ಮುಖ್ಯಮಂತ್ರಿ ಉಮಾಭಾರತಿ ಅವರ ಸೋದರಳಿಯ ರಾಹುಲ್ ಸಿಂಗ್ ಲೋಧಿ ಅವರು ಟಿಕಮ್‌ಗಢ್ ಜಿಲ್ಲೆಯ ಖರ್ಗಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಹುರಿಯಾಳಾಗಿದ್ದಾರೆ. 23 ಮುಖ್ಯಮಂತ್ರಿ ಬಾಬು ಲಾಲ್ ಗೌರ್ ಅವರ ಸೊಸೆ ಕೃಷ್ಣಾ ಗೌರ್ ಅವರು ಭೋಪಾಲ್‌ನ ಗೋವಿಂದಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
10ನೇ ಮುಖ್ಯಮಂತ್ರಿ ಕೈಲಾಶ್ ಜೋಶಿ ಅವರ ಪುತ್ರ ದೀಪಕ್ ಜೋಶಿ ಅವರು ಕಾಂಗ್ರೆಸ್ ಪಕ್ಷದಿಂದ ದೇವಾಸ್ ಜಿಲ್ಲೆಯ ಖಟೆಗಾಂವ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 13ನೇ ಸಿಎಂ ಅರ್ಜುನ್ ಸಿಂಗ್ ಪುತ್ರ ಅಜಯ್ ಸಿಂಗ್ ರಾಹುಲ್ ಸತ್ನಾ ಜಿಲ್ಲೆಯ ಚುರಾಹತ್ ವಿಧಾನಸಭಾ ಕ್ಷೇತ್ರದಿಂದ ಕಣದಲ್ಲಿದ್ದಾರೆ. 20 ನೇ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರ ಪುತ್ರ ಜೈವರ್ಧನ್ ಸಿಂಗ್ ಮತ್ತು ಸಹೋದರ ಲಕ್ಷ್ಮಣ್ ಸಿಂಗ್ ಕ್ರಮವಾಗಿ ಗುನಾ ಜಿಲ್ಲೆಯ ರಾಘೋಗಢ ವಿಧಾನಸಭಾ ಕ್ಷೇತ್ರ ಮತ್ತು ಚಚೌರಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಈ ವರ್ಷ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಮಧ್ಯಪ್ರದೇಶವೂ ಒಂದು. 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: 5 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ