ಎರ್ನಾಕುಲಂ (ಕೇರಳ): ಕಳೆದೆರಡು ವರ್ಷಗಳಿಂದ ಕೋವಿಡ್ ಬಿಕ್ಕಟ್ಟಿನಿಂದಾಗಿ ಕೇರಳದ ಕೊಚ್ಚಿಯ ರಾಯಲ್ ಟ್ರಾವೆಲ್ಸ್ ಮಾಲೀಕರು ಲಕ್ಷಾಂತರ ರೂಪಾಯಿ ಹಣ ಕೊಟ್ಟು ಖರೀದಿಸಿದ ತಮ್ಮ ಪ್ರವಾಸಿ ಬಸ್‌ಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ.
ಲಾಕ್‌ಡೌನ್‌ಗೂ ಮುನ್ನ ರಾಯಲ್ ಟ್ರಾವೆಲ್ಸ್ ಮಾಲೀಕ ರಾಯ್ಸನ್ ಜೋಸೆಫ್ ಅವರ ಬಳಿ ಒಟ್ಟು 20 ಬಸ್‌ಗಳಿದ್ದವು. ಇದರಲ್ಲಿ 10 ಬಸ್‌ಗಳನ್ನು ಖರೀದಿಸಿದ ಬೆಲೆಗೇ ಮಾರಾಟ ಮಾಡಲಾಗಿತ್ತು. ಇದೀಗ ಇತರ ಬಸ್‌ಗಳ ಸಾಲ-ತೆರಿಗೆಯನ್ನು ಪಾವತಿಸಲು ಮತ್ತು ಜೀವನ ವೆಚ್ಚ ಭರಿಸಲು ಉಳಿದ ಹತ್ತು ಬಸ್ಗಳಲ್ಲಿ ಮೂರು ಬಸ್‌ಗಳನ್ನು ಕೆಜಿಗೆ 45 ರೂ.ನಂತೆ ಮಾರಾಟ ಮಾಡುತ್ತಿದ್ದೇನೆ. ಮೂರು ಬಸ್ ಗಳನ್ನು ಮಾರಾಟ ಮಾಡಿದರೆ ಕನಿಷ್ಠ 15 ಲಕ್ಷ ರೂಪಾಯಿ ಸಿಗುತ್ತದೆ ಎಂದು ರಾಯ್ಸನ್ ಈಟಿವಿ ಭಾರತ್‌ಗೆ ತಿಳಿಸಿದರು.
ಕೋವಿಡ್ ನಂತರ, ಮದುವೆ ಮತ್ತು ಪ್ರವಾಸಕ್ಕೆ ತೆರಳಲು ಬಸ್ಗಳಿಗೆ ಡಿಮ್ಯಾಂಡ್ ಬರುತ್ತಿಲ್ಲ. ನಮಗೆ ಆದಾಯವಿಲ್ಲ. ಈ ವಲಯದಲ್ಲಿರುವ ಅನೇಕ ಮಂದಿ ಹಣಕಾಸು ಸಂಸ್ಥೆಗಳಿಂದ ದೊಡ್ಡ ಮೊತ್ತದ ಸಾಲವನ್ನು ಮರುಪಾವತಿ ಮಾಡದೆ, ಅಧಿಕಾರಿಗಳ ಹಿಂಸೆ ತಾಳಲಾರದೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಪೊಲೀಸರು ಸುಖಾಸುಮ್ಮನೆ ದಂಡ ವಿಧಿಸುತ್ತಿದ್ದಾರೆ ಎಂದು ರಾಯ್ಸನ್ ತಮ್ಮ ಅಳಲು ತೋಡಿಕೊಂಡರು.
ಇದನ್ನೂ ಓದಿ: ಬ್ಯಾಂಕ್‌ಗಳಿಗೆ ₹22,842 ಕೋಟಿ ವಂಚನೆ: ABG ಶಿಪ್‌ಯಾರ್ಡ್ ವಿರುದ್ಧ FIR ದಾಖಲಿಸಿದ ಸಿಬಿಐ
ನಿನ್ನೆಯಷ್ಟೇ ನನ್ನ ಅವರ ಒಂದು ಬಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ವಿಮೆ ಹಣ ಪಾವತಿಸಿದ್ದರೂ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಮತ್ತು ಪರವಾನಗಿಯನ್ನು ಹೊಂದಿದ್ದರೂ ದಂಡ ಹಾಕಿದ್ದರು ಎಂದು ರಾಯ್ಸನ್ ಆರೋಪಿಸಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಕನಿಷ್ಠ ಒಂದು ವರ್ಷದವರೆಗೆ ಪ್ರವಾಸಿ ಬಸ್‌ಗಳ ಮೇಲಿನ ತೆರಿಗೆಯನ್ನು ಮನ್ನಾ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.