ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಂತಾರಾಷ್ಟ್ರೀಯ ಡ್ರಗ್ ಸಿಂಡಿಕೇಟ್ ಅನ್ನು ಭೇದಿಸಿದೆ. ಕಾರ್ಯಾಚರಣೆ ವೇಳೆ ಮುಂಬೈಯ ಹೋಟೆಲ್ ಒಂದರಲ್ಲಿ ನವೆಂಬರ್ 9 ರಂದು 15 ಕೋಟಿ ರೂ ಮೌಲ್ಯದ 2 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದು, ಕೊಕೇನ್ ಜೊತೆಗೆ ಜಾಂಬಿಯಾದ ವಿದೇಶಿ ಪ್ರಜೆಯನ್ನೂ ಬಂಧಿಸಿತ್ತು. ಮುಂದುವರಿದ ಕಾರ್ಯಾಚರಣೆ ಭಾಗವಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ದೆಹಲಿಯ ಟಾಂಜೇನಿಯಾದ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ ಎಂದು ಎನ್ಸಿಬಿ ಮುಂಬೈ ವಲಯ ನಿರ್ದೇಶಕ ಅಮಿತ್ ಘ್ವಾವಟೆ ಸೋಮವಾರ ತಿಳಿಸಿದ್ದಾರೆ.
ಮುಂಬೈ, ದೆಹಲಿ, ಬೆಂಗಳೂರು, ಗೋವಾ ಸೇರಿದಂತೆ ಹಲವು ನಗರಗಳನ್ನು ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಹರಡಿಕೊಂಡಿದೆ. ಮುಂಬೈಯ ಎನ್ಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ಸಿಂಡಿಕೇಟ್ ಅನ್ನು ಭೇದಿಸಿ, ಇಬ್ಬರು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಹಬ್ಬಹರಿದಿನಗಳಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಯನ್ನು ತಡೆಯುವ ನಿಟ್ಟಿನಲ್ಲಿ, ಗುಪ್ತಚರ ಮಾಹಿತಿ ಆಧರಿಸಿ ಎನ್ಸಿಬಿ ಕಾರ್ಯಾಚರಣೆಗಿಳಿದಿತ್ತು. ಕುಖ್ಯಾತ ಅಂತಾರಾಷ್ಟ್ರೀಯ ಡ್ರಗ್ಸ್ ಸಿಂಡಿಕೇಟ್, ಭಾರತಕ್ಕೆ ಕೊಕೇನ್ ಕಳ್ಳಸಾಗಣೆ ಮಾಡಲು ಸ್ಕೆಚ್ ಹಾಕಿರುವ ಬಗ್ಗೆ ಗಮನಕ್ಕೆ ಬಂದಿತ್ತು. ಡ್ರಗ್ಸ್ ಪೂರೈಕೆದಾರನನ್ನು ಜಾಂಬಿಯಾ ಪ್ರಜೆ ಎಲ್ ಎ ಗಿಲ್ಮೋರ್ ಎಂದು ಗುರುತಿಸಲಾಗಿತ್ತು. ಶೀಘ್ರದಲ್ಲೇ ಮುಂಬೈನ ಹೋಟೆಲ್ನಲ್ಲಿ ತಂಗಲಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರಂತೆ ಮುಂಬೈಯ ಹೋಟೆಲ್ ಮೇಲೆ ನಿಗಾ ಇಡಲು ಇನ್ಸಿಬಿ ಅಧಿಕಾರಿಗಳ ತಂಡವನ್ನು ತಕ್ಷಣವೇ ನೇಮಕ ಮಾಡಲಾಗಿತ್ತು. ನವೆಂಬರ್ 9 ರಂದು ಗಿಲ್ಮೋರ್ ಹೋಟೆಲ್ಗೆ ಚೆಕ್ ಇನ್ ಆಗಿರುವ ಬಗ್ಗೆ ದೃಢಪಡಿಸಿಕೊಂಡು, ಎನ್ಸಿಬಿ ತಂಡ ದಾಳಿ ಮಾಡಿತ್ತು.
ಆರಂಭದಲ್ಲಿ ಆತನ ಲಗೇಜ್ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರಲಿಲ್ಲ. ಆದರೆ ನಂತರ ಕ್ಯಾರಿ ಬ್ಯಾಗ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಬ್ಯಾಗ್ನ ಒಳಪದರಗಳಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಪದರಗಳನ್ನು ಕತ್ತರಿಸಿ ನೋಡಿದಾಗ ಬ್ಯಾಗ್ನಲ್ಲಿ ಎರಡು ಚೀಲಗಳಲ್ಲಿ 2 ಕೆಜಿ ಕೊಕೇನ್ ಪತ್ತೆಯಾಗಿತ್ತು.
ನವೆಂಬರ್ 9 ರಂದು ವಿಮಾನದ ಮೂಲಕ ಗಿಲ್ಮೋರ್ ಮುಂಬೈಗೆ ಆಗಮಿಸಿದ್ದನು. ಈತ ಮಾದಕವಸ್ತು ರವಾನೆಗಾಗಿ ಜಾಂಬಿಯಾದ ಲುಸಾಕಾದಿಂದ ಇಥಿಯೋಪಿಯಾದ ಅಡಿಸ್ ಅಬಾಬಾಗೆ ಭೇಟಿ ನೀಡಿದ್ದನು. ತನಿಖೆ ವೇಳೆ ಗಿಲ್ಮೋರ್, ಮಾದಕವಸ್ತು ಕಳ್ಳಸಾಗಣೆಯೊಂದಿಗೆ ಸಂಬಂಧ ಹೊಂದಿರುವ ಕೆಲವು ಮಧ್ಯವರ್ತಿಗಳ ಬಗ್ಗೆ ಮಾಹಿತಿ ನೀಡಿದ್ದನು. ಜೊತೆಗೆ ಆತನಿಗೆ ಹ್ಯಾಂಡ್ಲರ್ ಮೂಲಕ ಮಾಹಿತಿ ನೀಡಿರುವುದನ್ನು ಹೇಳಿದ್ದನು. ಹ್ಯಾಂಡ್ಲರ್ನಲ್ಲಿ ಸರಕು ತಲುಪಿಸಲು ದೆಹಲಿಗೆ ಬರುವಂತೆ ಹೇಳಲಾಗಿತ್ತು. ಅದನ್ನು ಆಧರಿಸಿ, ಎನ್ಸಿಬಿ ತಂಡ ದೆಹಲಿಗೆ ತಲುಪಿ, ಮಾದಕವಸ್ತು ನೀಡಲು ಸೂಚಿಸಿದ್ದ ಜಾಗದಲ್ಲಿ ಬಲೆ ಬೀಸಿತ್ತು. ಅದರಂತೆ ನವೆಂಬರ್ 11ರಂದು ದೆಹಲಿಯಲ್ಲಿ ಗಿಲ್ಮೋರ್ನಿಂದ ಡ್ರಗ್ಸ್ ಪಡೆಯಬೇಕಾಗಿದ್ದ ಎಂ ಆರ್ ಅಗಸ್ಟಿನೋ ಎಂಬ ತಾಂಜೇನಿಯಾ ಮಹಿಳೆಯನ್ನು ಎನ್ಸಿಬಿ ತಂಡ ಬಂಧಿಸಿದೆ. ಸದ್ಯ ಇಬ್ಬರನ್ನೂ ಹೆಚ್ಚಿನ ತನಿಖೆಗಾಗಿ ಮುಂಬೈಯ ಎನ್ಸಿಬಿ ವಶಕ್ಕೆ ತೆಗೆದುಕೊಂಡಿದೆ.
ಇದನ್ನೂ ಓದಿ: ಬೆಂಗಳೂರು: ಮನೆಯಲ್ಲಿ ಮಿನಿ ಡ್ರಗ್ಸ್ ಫ್ಯಾಕ್ಟರಿ! ನೈಜೀರಿಯಾ ವ್ಯಕ್ತಿ ಬಂಧನ