ನವದೆಹಲಿ: ವಿಶ್ವಾದ್ಯಂತ ಮತ್ತೆ ಕೊರೋನಾ ಅಟ್ಟಹಾಸ ಮೇರೆಮೀರುತ್ತಿದೆ. ಚೀನಾದಲ್ಲಿ ಮತ್ತೆ ಕೋವಿಡ್ ಉಲ್ಬಣಗೊಂಡಿದೆ. ದೇಶದಲ್ಲೂ ಕೆಲ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲ ಮುಂಜಾಗ್ರತೆ ಕ್ರಮಗಳನ್ನು ಘೋಷಿಸಿವೆ.
ನಿನ್ನೆ ಪ್ರಧಾನಿ ಮೋದಿ ನೇತೃತ್ಚದಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಉನ್ನತ ಮಟ್ಟದ ಸಭೆ ನಡೆದು, ಕೊರೋನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ವೈದ್ಯಕೀಯ ವ್ಯವಸ್ಥೆಯನ್ನ ಸನ್ನದ್ಧವಾಗಿಡಲು ಸೂಚನೆ ನೀಡಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ, ದೂರದ ಪ್ರದೇಶಗಳಲ್ಲಿ ರಕ್ತ, ಲಸಿಕೆ ಮತ್ತು ಔಷಧ ವಿತರಣೆಗೆ ಡ್ರೋನ್‌ಗಳನ್ನು ಬಳಸಲಾಗುತ್ತಿದೆ ಎಂದು ಘೋಷಿಸಿದ್ದಾರೆ. 2014 ರಲ್ಲಿ ದೇಶದಲ್ಲಿ ಕೇವಲ 6 ಏಮ್ಸ್ಗಳು ಇದ್ದವು. ಈಗ ಅವುಗಳ ಸಂಖ್ಯೆ 22ಕ್ಕೆ ಏರಿಕೆ ಆಗಿದೆ. ಅಷ್ಟೇ ಅಲ್ಲ ಶೇ 90 ರಷ್ಟು ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಆರೋಗ್ಯ ರಕ್ಷಣೆಯನ್ನು ಸಮಗ್ರ ಆರೋಗ್ಯ ರಕ್ಷಣೆಯಾಗಿ ಪರಿವರ್ತಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ಸಿಂದಿಯಾ ಹೇಳಿದ್ದಾರೆ. ಪ್ರಧಾನಿಗಳ ಆಶಯದಂತೆ 'ಒಂದು ರಾಷ್ಟ್ರ ಒಂದು ಆರೋಗ್ಯ'ದ ದೃಷ್ಟಿಕೋನವನ್ನು ಮುಂದಿಟ್ಟುಕೊಂಡು ನಾವು ಈಗಾಗಲೇ ಕೋವಿಡ್ ನಿಯಂತ್ರಣಕ್ಕೆ ತಂದಿದ್ದೇವೆ. ಮುಂದೆಯೂ ಕೊರೊನಾ ತಡೆಗಟ್ಟಲು ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ.
ಅಷ್ಟೇ ಅಲ್ಲ ಸೋಮವಾರದವರೆಗೆ 220 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಮಾಹಿತಿ ನೀಡಿದರು.
ಇದನ್ನು ಓದಿ: ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ.. ವಿಮಾನ ನಿಲ್ದಾಣಗಳಲ್ಲಿ ರ‍್ಯಾಂಡಮ್ ಟೆಸ್ಟ್: ಕೇಂದ್ರ ಸಚಿವ ಮಾಂಡವಿಯಾ