ತಿರುಮಲ (ಆಂಧ್ರಪ್ರದೇಶ): ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಡ್ರೋನ್ ಹಾರಾಟ ನಡೆಸಿದ ಘಟನೆ ದೇಶದ ಅತ್ಯಂತ ಪ್ರಸಿದ್ಧ ಕ್ಷೇತ್ರ ತಿರುಪತಿ ಜಿಲ್ಲೆಯ ತಿರುಮಲದಲ್ಲಿ ಶುಕ್ರವಾರ ನಡೆದಿದೆ. ಅಸುರಕ್ಷಿತ ಈ ಡ್ರೋನ್ ಹಾರಾಟ ಈ ಪ್ರದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಹರಿಯಾಣ ಮೂಲದ ದಿನೇಶ್ ಎಂಬುವವರು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ತಿರುಮಲ ತಲುಪಿದ್ದರು. ವೆಂಕಟೇಶ್ವರ ದೇವರ ದರ್ಶನ ಮುಗಿಸಿ ಕಾರಿನಲ್ಲಿ ಬೆಟ್ಟ ಇಳಿಯುತ್ತಿದ್ದಾಗ 53ನೇ ತಿರುವಿನಲ್ಲಿ ಡ್ರೋನ್ ಹಾರಾಟ ನಡೆಸಿರುವುದು ಕಂಡು ಬಂದಿದೆ. ಶ್ರೀವಾರಿ ಮೆಟ್ಟಿಲು, ಕಾಲುದಾರಿ ಮತ್ತು ಅರಣ್ಯ ಪ್ರದೇಶದಲ್ಲಿ ಇವರು ಬಣ್ಣ ಬಳಿಯಲು ಆರಂಭಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅನುಮತಿ ಇಲ್ಲದೇ ಡ್ರೋನ್ ಹಾರಿಸದಂತೆ ಸೂಚಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲಿಪಿರಿ ಚೆಕ್ ಪಾಯಿಂಟ್ನಿಂದ ವಾಹನಗಳ ಮೂಲಕ ತಿರುಮಲ ತಲುಪಬೇಕು. ಅಲ್ಲಿನ ಭದ್ರತಾ ಸಿಬ್ಬಂದಿ ವಾಹನ ಮತ್ತು ಲಗೇಜ್ ಸ್ಕ್ಯಾನಿಂಗ್ ಮಾಡ್ತಾರೆ. ಆದರೆ, ಚೆಕ್ ಪಾಯಿಂಟ್ ಮೂಲಕ ತಿರುಮಲಕ್ಕೆ ಡ್ರೋನ್ ತಂದು ಬಳಕೆ ಮಾಡಿದ್ದು ಸಂಚಲನ ಮೂಡಿಸಿದೆ.
ಈ ನಡುವೆ ಘಾಟ್ ರಸ್ತೆಯಲ್ಲಿ ಹಾರಾಟ ನಡೆಸಿದ ಲಘು ಡ್ರೋನ್ ಅನ್ನು ವಿಜಿಲೆನ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಟಿಟಿಡಿ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಪ್ಲಾಸ್ಟಿಕ್ ಡ್ರೋನ್ ಆಗಿರುವುದರಿಂದ ಸ್ಕ್ಯಾನಿಂಗ್ ಪಾಯಿಂಟ್‌ನಲ್ಲಿ ಅದನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಇನ್ನು ಘಟನೆಯ ಹೆಚ್ಚಿನ ತನಿಖೆ ಮುಂದುವರಿಯುತ್ತದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋನ್ ಜೊತೆಗೆ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ವಿಜಿಲೆನ್ಸ್ ಅಧಿಕಾರಿಗಳು, ಡ್ರೋನ್ ಹಾರಾಟ ನಡೆಸಿದ ವ್ಯಕ್ತಿಯನ್ನು ತಿರುಮಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ದಿನೇಶ್ ಸೇನೆಯಲ್ಲಿ ಎಸ್ಪಿ ಮಟ್ಟದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ. ಆದರೆ, ನಿಯಮಗಳ ಅರಿವಿಲ್ಲದೇ ಈ ಡ್ರೋನ್ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ.
ಭಕ್ತರಲ್ಲಿ ಕೆಲಕಾಲ ಆತಂಕ: ತಿರುಮಲಕ್ಕೆ ಭಯೋತ್ಪಾದಕರ ಬೆದರಿಕೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದ್ದವು. ಇಂತಹ ಸಂದರ್ಭಗಳಲ್ಲಿ ನಿರಂತರವಾಗಿ ಜಾಗೃತರಾಗಬೇಕಾದ ಟಿಟಿಡಿ ಜಾಗೃತ ದಳ ಭದ್ರತೆ ವಿಚಾರದಲ್ಲಿ ಉದಾಸೀನ ತಾಳುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಅಲಿಪಿರಿಯ ಟೋಲ್‌ಗೇಟ್‌ನಲ್ಲಿ ತಪಾಸಣೆಗಳು ನಾಮಮಾತ್ರವಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಗಾಂಜಾದಿಂದ ಹಿಡಿದು ಡ್ರೋನ್‌ಗಳವರೆಗೆ ಎಲ್ಲವೂ ತಿರುಮಲಕ್ಕೆ ಮುಕ್ತವಾಗಿ ಬರುತ್ತಿದೆ ಎಂಬ ದೂರುಗಳು ಕೂಡಾ ಕೇಳಿ ಬಂದಿವೆ. ಸುರಕ್ಷತಾ ವೈಫಲ್ಯವನ್ನು ಪರಾಮರ್ಶಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.
ಇದನ್ನು ಓದಿ:ಹವಾಮಾನ ವೈಪರೀತ್ಯ: ಮುಂಬೈ-ಗುವಾಹಟಿ ವಿಮಾನದ ಮಾರ್ಗ ಬದಲು, ಢಾಕಾದಲ್ಲಿ ಲ್ಯಾಂಡ್