ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕೆಯೊಬ್ಬರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 42 ಕೋಟಿ ರೂ ಮೌಲ್ಯದ ಹೆರಾಯಿನ್ (ಮಾದಕ ವಸ್ತು) ಅನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. 5.90 ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. ಮಲಾವಿಯಿಂದ ದೋಹಾ ಮೂಲಕ ಹೈದರಾಬಾದ್‌ಗೆ ಆರೋಪಿ ಮಹಿಳೆ ಬಂದಿಳಿದಿದ್ದರು. ಆರೋಪಿಯನ್ನು ಎನ್‌ಡಿಪಿಎಸ್ ಕಾಯ್ದೆ, 1985 ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಆರ್‌ಐ ತಿಳಿಸಿದೆ.
ಇದೇ ರೀತಿಯ ಘಟನೆಗಳು..: ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ವಾಹನವೊಂದರಲ್ಲಿ ಸಾಗಿಸುತ್ತಿದ್ದ ಸುಮಾರು 20 ಕೋಟಿ ರೂ. ಮೌಲ್ಯದ 5 ಕೆಜಿ ಹೆರಾಯಿನ್ ಅನ್ನು ಇತ್ತೀಚೆಗೆ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದರು. ವಾಹನದ ಸಂಪೂರ್ಣ ತಪಾಸಣೆ ನಡೆಸಿದ್ದು ಹೆರಾಯಿನ್ ಹೊಂದಿದ್ದ 390 ಸೋಪ್ ಕೇಸ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಾಹನದ ಮೇಲ್ಭಾಗದಲ್ಲಿ ರಹಸ್ಯ ಚೇಂಬರ್ ಮಾಡಿ ಮರೆಮಾಡಲಾಗಿತ್ತು. ಸರಕುಗಳನ್ನು ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿ ಲೋಡ್ ಮಾಡಿ ನಾಗಾವ್ ಬೈಪಾಸ್ಗೆ ತಲುಪಿಸಲಾಗುತ್ತಿತ್ತು. ಹೊನೈ ಜಿಲ್ಲೆಯ ಇಸ್ಲಾಂ ನಗರದ ಎಂಡಿ ಫುಜೆಲ್ ಅಹ್ಮದ್ ಎಂಬ ವಾಹನ ಚಾಲಕನನ್ನು ಬಂಧಿಸಲಾಗಿತ್ತು.
ಡ್ರೋನ್ ಮೂಲಕ ಮಾದಕ ವಸ್ತು ಸಾಗಾಟ: ಪಂಜಾಬ್‌ನ ಅಮೃತಸರದಲ್ಲಿ ಕೆಲವು ದಿನಗಳ ಹಿಂದೆ ಹೆರಾಯಿನ್ ಹೊತ್ತು ಬಂದಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಹೊಡೆದುರುಳಿಸಿತ್ತು. ಮಧ್ಯರಾತ್ರಿ 2.30ರ ಸುಮಾರಿಗೆ ಡ್ರೋನ್ ಚಲನವಲನ ಕಂಡುಬಂದಿತ್ತು. ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್ಎಫ್ 22 ಬೆಟಾಲಿಯನ್ ಯೋಧರಿಗೆ ಡ್ರೋನ್ ಶಬ್ದ ಕೇಳಿಸಿದೆ. ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಡ್ರೋನ್ ಪತ್ತೆ ಹಚ್ಚಿ ಹೊಡೆದುರುಳಿಸಿ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ಪಾಕಿಸ್ತಾನದಿಂದ ಹೆರಾಯಿನ್ ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್