ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮುಖ್ಯಸ್ಥರಾದ ಡಾ.ಜಿ.ಸತೀಶ್ ರೆಡ್ಡಿ ಅವರಿಗೆ ಪ್ರತಿಷ್ಠಿತ 'ಆರ್ಯಭಟ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಭಾರತದಲ್ಲಿ ಖಗೋಳ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಜೀವಮಾನ ಕೊಡುಗೆಗಾಗಿ ಭಾರತೀಯ ಖಗೋಳ ಸೊಸೈಟಿ (ASI) ನೀಡುವ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಸತೀಶ್ ರೆಡ್ಡಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಇದನ್ನೂ ಓದಿ: ಕ್ಷಿಪಣಿ ವ್ಯವಸ್ಥೆಗಳ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ: ಡಿಆರ್‌ಡಿಒ ಮುಖ್ಯಸ್ಥ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಕ್ಷಿಪಣಿ ತಂತ್ರಜ್ಞಾನಗಳ ಪ್ರವರ್ತಕ ಎನಿಸಿಕೊಂಡಿರುವ ಸತೀಶ್ ರೆಡ್ಡಿ ಅವರು ಕಾರ್ಯತಂತ್ರ ಮತ್ತು ಯುದ್ಧತಂತ್ರದ ಕ್ಷಿಪಣಿ ವ್ಯವಸ್ಥೆಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಈ ಕೊಡುಗೆಗಳು ರಕ್ಷಣಾ- ತಂತ್ರಜ್ಞಾನಗಳಲ್ಲಿ ದೇಶವು ಸ್ವಾವಲಂಬಿಯಾಗಲು ಸಹಾಯ ಮಾಡಿದೆ. ಅವರ ನಿರಂತರ ಪ್ರಯತ್ನದಿಂದಾಗಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ರಕ್ಷಣಾ ಸಂಶೋಧನೆಯು ಉನ್ನತ ತಂತ್ರಜ್ಞಾನದೊಂದಿಗೆ ವೇಗವನ್ನು ಪಡೆಯುತ್ತಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.