ಮುಂಬೈ: ಭಾರತದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾರ್ವಜನಿಕ ಜೀವನಕ್ಕೆ ಹೊಸಬರೇನಲ್ಲ. 1997ರಲ್ಲಿ ನಗರ ಪಾಲಿಕೆಯ ಸದಸ್ಯರಾಗಿದ್ದರಿಂದ ಹಿಡಿದು 2022ರಲ್ಲಿ ದೇಶದ ಪ್ರಥಮ ಪ್ರಜೆಯಾಗುವವರೆಗೆ ಸಾರ್ವಜನಿಕ ಸೇವೆಯಲ್ಲಿ ಅನೇಕ ಮಹತ್ವದ ಸ್ಥಾನಗಳನ್ನು ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಜೊತೆಗೆ, ನೂತನ ರಾಷ್ಟ್ರಪತಿಗಳು ಹಲವಾರು ಹೊಸ, ಕುತೂಹಲಕರ ದಾಖಲೆಗಳನ್ನೂ ಬರೆದಿದ್ದಾರೆ. ಹಾಗಾದ್ರೆ ಬನ್ನಿ, ಮುರ್ಮು ಅವರ ಬಗೆಗಿನ ಮತ್ತಷ್ಟು ಇಂಟೆರೆಸ್ಟಿಂಗ್ ವಿಷಯಗಳನ್ನು ತಿಳಿಯೋಣ.
1. ಮುರ್ಮು ಅವರು ಬುಡಕಟ್ಟು ಜನಾಂಗದ ಪ್ರಥಮ ರಾಷ್ಟ್ರಪತಿಯಾಗಿದ್ದಾರೆ. ಪ್ರತಿಭಾ ಪಾಟೀಲ್ (2007-2012) ನಂತರ ಈ ಹುದ್ದೆ ಅಲಂಕರಿಸಿದ 2ನೇ ಮಹಿಳೆಯಾಗಿದ್ದಾರೆ. ಡಾ.ಎಸ್.ರಾಧಾಕೃಷ್ಣನ್ (1962-1967), ಡಾ. ಜಾಕೀರ್ ಹುಸೇನ್ (1967-69), ಡಾ.ಶಂಕರ ದಯಾಳ ಶರ್ಮಾ (1992-1997), ಕೆ.ಆರ್. ನಾರಾಯಣನ್ (1997-2002), ಮತ್ತು ಪ್ರಣಬ್ ಮುಖರ್ಜಿ (2012-17) ಅವರ ನಂತರ ಶಿಕ್ಷಣ ಕ್ಷೇತ್ರದ ಹಿನ್ನೆಲೆಯನ್ನು ಹೊಂದಿರುವ 6ನೇ ರಾಷ್ಟ್ರಪತಿಗಳಾಗಿದ್ದಾರೆ.
2. ಪುತ್ರಿ ಇತಿಶ್ರೀ ಹೆಂಬ್ರಮ್ ಹೇಳುವ ಪ್ರಕಾರ, ಅವರೊಬ್ಬ ಕಠಿಣ ಆಡಳಿಗಾರ್ತಿ. ತಮ್ಮ 64ನೇ ವಯಸ್ಸಿನಲ್ಲಿ ರಾಷ್ಟ್ರಪತಿಯಾಗುವ ಮೂಲಕ ಮುರ್ಮು, ಈ ಹಿಂದೆ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದ ನೀಲಂ ಸಂಜೀವ ರೆಡ್ಡಿ (1977-1982) ಅವರನ್ನು ಹಿಂದಿಕ್ಕಿದ್ದಾರೆ. ಚಿಕ್ಕಂದಿನಲ್ಲಿ ಬಹಳ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮುರ್ಮು, ತಮ್ಮ ಬುಡಕಟ್ಟು ಸಮುದಾಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರಥಮ ವ್ಯಕ್ತಿಯಾದರು. ಅವರ ತಂದೆ ಬಿರಂಚಿ ಟುಡು ಹಾಗೂ ತಾತ ನಾರಾಯಣ ಟುಡು ಬುಡಕಟ್ಟು ಸಮುದಾಯದ ನಾಯಕರಾಗಿದ್ದರು.
3. ಪ್ರಾಥಮಿಕ ಶಿಕ್ಷಣ ಕಲಿತ ಶಾಲೆಯನ್ನು ಬಿಟ್ಟು ಹೊರಡುವ ಸಮಯದಲ್ಲಿ, ಜೀವನದಲ್ಲಿ ನೀನು ಮುಂದೆ ಏನು ಮಾಡಬೇಕೆಂದು ಬಯಸಿರುವೆ ಎಂದು ಅಲ್ಲಿನ ಮುಖ್ಯೋಪಾಧ್ಯಾಯರು ಪ್ರಶ್ನಿಸಿದ್ದರಂತೆ. ಚಿಕ್ಕ ಯವಸ್ಸಿನ ಮುರ್ಮು ಅವತ್ತು ಮುಗ್ಧವಾಗಿ, 'ಸಾರ್ವಜನಿಕ ಸೇವೆ' ಎಂದುತ್ತರಿಸಿದ್ದರಂತೆ. ಅದಾಗಿ ಐದು ದಶಕಗಳ ನಂತರ ಅವರು ದೇಶದ ಪ್ರಥಮ ಪ್ರಜೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಶಾಲಾ ಶಿಕ್ಷಣ ಮುಗಿದ ನಂತರ ಉನ್ನತ ಶಿಕ್ಷಣ ಕೊಡಿಸುವ ಸಲುವಾಗಿ, ಶಾಸಕ ಹಾಗೂ ಸಚಿವರಾಗಿದ್ದ ಚಾಚಾ ಕಾರ್ತಿಕ್ ಚರಣ ಮಾಂಝಿ (1967) ಮುರ್ಮು ಅವರನ್ನು ಭುವನೇಶ್ವರಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿನ ರಮಾ ದೇವಿ ಮಹಾವಿದ್ಯಾಲಯದಲ್ಲಿ ಮುರ್ಮು ಅವರು 1979 ರಲ್ಲಿ ಸ್ನಾತಕೋತ್ತರ ಪದವಿ ಪಡೆದರು.
4. ಅದೇ ವರ್ಷದಲ್ಲಿ ಒಡಿಶಾ ಸರ್ಕಾರದ ಇಲಾಖೆಯೊಂದರಲ್ಲಿ ಗುಮಾಸ್ತರಾಗಿ ಕೆಲಸ ಆರಂಭಿಸಿದ ಅವರು ಸುಮಾರು ವರ್ಷ ಅಲ್ಲಿಯೇ ಕೆಲಸ ಮಾಡಿದರು. ಈ ಮಧ್ಯೆ ಉಪರಬೇಡಾ ದಿಂದ 10 ಕಿಲೋಮೀಟರ್ ದೂರದ ಪಹಾಡಪುರದಲ್ಲಿ ವಾಸಿಸುತ್ತಿದ್ದ, ಬ್ಯಾಂಕ್ ಆಫ್ ಇಂಡಿಯಾ ನೌಕರರಾಗಿದ್ದ ಶ್ಯಾಮ ಚರಣ ಮುರ್ಮು ಅವರೊಂದಿಗೆ ವಿವಾಹವಾಯಿತು. ದಂಪತಿಗೆ ಜನಿಸಿದ ಮೊದಲ ಮಗು ಮೂರು ವರ್ಷದ್ದಾಗಿದ್ದಾಗ ತೀರಿಕೊಂಡಿತು. ಇದರ ನಂತರ ಇಬ್ಬರು ಪುತ್ರರು- ಲಕ್ಷ್ಮಣ ಮತ್ತು ಸಿಪುನ್, ಓರ್ವ ಪುತ್ರಿ-ಇತಿಶ್ರೀ ಜನಿಸಿದರು.
5. ಇದರ ನಂತರ ಕುಟುಂಬದ ಜವಾಬ್ದಾರಿಗಳನ್ನು ನೋಡಿಕೊಳ್ಳುವ ಸಲುವಾಗಿ ಮುರ್ಮು ಸರ್ಕಾರಿ ನೌಕರಿ ಬಿಟ್ಟರು. ಆದರೆ ರಾಯರಂಗಪುರದ ಇಂಟೆಗ್ರಲ್ ಅಂಡ್ ಎಜುಕೇಶನಲ್ ರಿಸರ್ಚ್ ಸಂಸ್ಥೆಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಅಧ್ಯಯನ ಮುಂದುವರೆಸಿದರು. ಆದಿವಾಸಿ ಸಮುದಾಯದಲ್ಲಿದ್ದರೂ ಶಿಕ್ಷಣ ಪಡೆದ, ನೌಕರಿ ಮಾಡುವ ವಿರಳ ವ್ಯಕ್ತಿಗಳಲ್ಲೊಬ್ಬರಾಗಿದ್ದ ಮುರ್ಮು ಅವರನ್ನು 1990ರಲ್ಲಿ ಗುರುತಿಸಿದ ಭಾರತೀಯ ಜನತಾ ಪಕ್ಷವು ಅವರಿಗೆ ಸಾರ್ವಜನಿಕ ರಂಗದಲ್ಲಿ ಸೇವೆ ಸಲ್ಲಿಸುವಂತೆ ಪ್ರೇರಣೆ ನೀಡಿತು.
6. 1997ರಲ್ಲಿ ರಾಯರಂಗಪುರದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅವರನ್ನು ಕಣಕ್ಕಿಳಿಸಿತು ಹಾಗೂ ಮುರ್ಮು ಪಾಲಿಕೆ ಸದಸ್ಯರಾಗಿ ಚುನಾಯಿತರಾದರು. ಇಲ್ಲಿಂದ ಅವರ ರಾಜಕೀಯ ಜೀವನಕ್ಕೆ ಮುನ್ನುಡಿ ಬರೆಯಲಾಯಿತು. ಅದಾಗಿ ಮೂರು ವರ್ಷಗಳ ನಂತರ 2000ರಲ್ಲಿ ಅವರು ಬಿಜೆಪಿಯಿಂದ ಶಾಸಕರಾದರು. 2004ರಲ್ಲಿ ಮತ್ತೊಮ್ಮೆ ಚುನಾಯಿತರಾಗಿ, ರಾಜ್ಯ ಸರ್ಕಾರದಲ್ಲಿ 5 ವರ್ಷಗಳ ವಿವಿಧ ಇಲಾಖೆಗಳ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ನಂತರ 2015ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನಿಯುಕ್ತಿಯಾದರು. ಒಡಿಶಾ ರಾಜ್ಯದಿಂದ ರಾಜ್ಯಪಾಲರಾಗಿ ನಿಯೋಜಿತವಾದ ಪ್ರಥಮ ಮಹಿಳೆ ಎಂಬ ಖ್ಯಾತಿಗೆ ಭಾಜನರಾದರು.
7. ಇವರ ಹಿರಿಯ ಮಗ ಲಕ್ಷ್ಮಣ 2009ರಲ್ಲಿ ತೀರಿಕೊಂಡರು. ನಂತರ 2013ರಲ್ಲಿ ಮತ್ತೊಬ್ಬ ಪುತ್ರ ಸಿಪುನ್ ಅಪಘಾತದಲ್ಲಿ ತೀರಿಕೊಂಡರು. 2014ರಲ್ಲಿ ಪತಿ ಶ್ಯಾಮ ಚರಣ ಅವರು ಹೃದಯಾಘಾತದಿಂದ ನಿಧನರಾದರು. ಹಿರಿಯ ಮಗನ ಮೃತ್ಯುವಿನ ನಂತರ ಅವರು ಬ್ರಹ್ಮಕುಮಾರಿ ಪಂಥ ಸೇರಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ನಂತರ ಮುರ್ಮು ತಮ್ಮ ಪೂರ್ವಜರ ಮನೆಯಲ್ಲಿ 'ಶ್ಯಾಮ, ಲಕ್ಷ್ಮಣ, ಸಿಪುನ್ ಮೆಮೋರಿಯಲ್ ರೆಸಿಡೆನ್ಷಿಯಲ್ ಸ್ಕೂಲ್ ಫಾರ್ ಟ್ರೈಬಲ್ ಗರ್ಲ್ಸ್' ಹೆಸರಿನ ವಸತಿ ಶಾಲೆಯೊಂದನ್ನು ಆರಂಭಿಸಿದರು. ತಾವು ಗಳಿಸಿದ ಬಹುತೇಕ ಆದಾಯವನ್ನು ಈ ಶಾಲೆಗೆ ದಾನ ನೀಡಿದರು.
8. 2006ರಿಂದ ಮುರ್ಮು ಶಾಕಾಹಾರಿಯಾಗಿ ಬದಲಾದರು ಹಾಗೂ ಇವರು ಈಗ ಕೇವಲ ಸಾತ್ವಿಕ ಭೋಜನವನ್ನು ಮಾತ್ರ ಸೇವಿಸುತ್ತಾರೆ. ಅಡುಗೆ ಮಾಡುವುದರಲ್ಲಿ ಖುಷಿ ಕಾಣುವ ಇವರಿಗೆ ಸಂಥಾಲ್ ಆದಿವಾಸಿ ಶೈಲಿಯ ಸೀರೆ ಉಡುವುದು ಬಹಳ ಇಷ್ಟ.
9. ತಮ್ಮ ಶಾಲಾ ದಿನಗಳಿಂದ ಹಿಡಿದು ಈವರೆಗೆ ಅವರು 100ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. ಪ್ರಕೃತಿಯ ಸೇವೆಗಾಗಿಯೂ ದುಡಿದ ಮುರ್ಮು ಹಲವಾರು ಪ್ರದೇಶಗಳಲ್ಲಿ ಒಟ್ಟಾರೆ 1000 ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ.