ನವದೆಹಲಿ: ದೇಶದ ಬಹುಪಾಲು ಕಡಿಮೆ ಆದಾಯ ಮತ್ತು ಮಧ್ಯಮ ವರ್ಗದ ಕುಟುಂಬಗಳು ನೆಚ್ಚಿಕೊಂಡಿರುವ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಲ್ಲ ಪ್ರಮುಖ ಉಳಿತಾಯ ಯೋಜನೆಗಳಲ್ಲಿನ ಬಡ್ಡಿದರ ಇಳಿಕೆ ಬಗ್ಗೆ ಹಣಕಾಸು ಸಚಿವಾಲಯವು ಪ್ರಕಟಣೆ ಹೊರಡಿಸಿದೆ.
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಠೇವಣಿಗಳ ಬಡ್ಡಿದರವನ್ನು ಶೇ. 7.1ರಿಂದ ಶೇ. 6.4ಕ್ಕೆ ಇಳಿಸಲಾಗಿದೆ, 50 ಮೂಲ ಅಂಕಗಳ ಕಡಿತವಾದಂತಾಗಿದೆ. ಹಾಗೆಯೇ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಮೇಲಿನ ಬಡ್ಡಿದರವನ್ನು ಶೇ.7.4ರಿಂದ ಶೇ. 6.5ಕ್ಕೆ ಕಡಿಮೆ ಮಾಡಲಾಗಿದ್ದು, 90 ಮೂಲ ಅಂಕಗಳ ಕಡಿತವಾಗಿದೆ.
ಹಿರಿಯ ಉಳಿತಾಯ ಯೋಜನೆ ಠೇವಣಿಗಳು (ಎಸ್‌ಸಿಎಸ್‌ಎಸ್) ನಿವೃತ್ತರು ಮತ್ತು ಹಿರಿಯ ನಾಗರಿಕರಿಗೆ ತಮ್ಮ ಹಣವನ್ನು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಲ್ಲಿ ಹೂಡಿಕೆ ಮಾಡುವ ಭರವಸೆಯ ಬಡ್ಡಿ ಆದಾಯ ಪಡೆಯಲು ಒಂದು ಪ್ರಮುಖ ಹೂಡಿಕೆ ಮಾರ್ಗವಾಗಿದೆ. ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳ (ಎನ್‌ಎಸ್‌ಸಿ) ಬಡ್ಡಿದರವನ್ನು ಶೇ. 6.8ರಿಂದ ಶೇ. 5.9ಕ್ಕೆ ಇಳಿಸಲಾಗಿದೆ.
ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ರೂಪಿಸಿದ ವಿನೂತನ ಮಾದರಿಯ ಹಣಕಾಸು ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆಯ (ಎಸ್‌ಎಸ್‌ಎಸ್) ಬಡ್ಡಿದರವನ್ನು ಶೇ. 7.6ರಿಂದ ಶೇ.6.9ಕ್ಕೆ ಇಳಿಸಲಾಗಿದೆ. ಅಂತೆಯೇ, 10 ವರ್ಷ ಮತ್ತು ನಾಲ್ಕು ತಿಂಗಳು (124 ತಿಂಗಳುಗಳು) ಮುಕ್ತಾಯ ಅವಧಿ ಹೊಂದಿದ್ದ ಕಿಸಾನ್ ವಿಕಾಸ್ ಪತ್ರದ (ಕೆವಿಪಿ) ಅವಧಿಯನ್ನು ಹನ್ನೊಂದುವರೆ (11 ವರ್ಷ 6 ತಿಂಗಳು ಅಥವಾ 138 ತಿಂಗಳು) ವರ್ಷಗಳವರೆಗೆ ವೃದ್ಧಿಗೊಳಿಸಲಾಗಿದೆ. 11 ವರ್ಷ 6 ತಿಂಗಳು ಅಂದರೆ 138 ತಿಂಗಳ ನಂತರ ಬಳಿಕ ಈ ಪತ್ರಗಳಲ್ಲಿದ ಹೂಡಿಕೆಯು ದ್ವಿಗುಣಗೊಳ್ಳಲಿದೆ. ಇದರಿಂದಾಗಿ ಯೋಜನೆಯ ಬಡ್ಡಿದರವು ಶೇ. 6.9ರಿಂದ ಶೇ. 6.2ಕ್ಕೆ ಅಂದರೆ 70 ಮೂಲ ಅಂಕಗಳ ಇಳಿಕೆ ಹೊಂದಲಿದೆ.
ಹಾಗೆಯೇ ಮಾಸಿಕ ಆದಾಯ ಯೋಜನೆಗಳ ಬಡ್ಡಿದರವನ್ನು ಶೇ. 6.6ರಿಂದ 5.7ಕ್ಕೆ ಇಳಿಸಲಾಗಿದೆ. ಯೋಜನೆಯಡಿ ಬಡ್ಡಿಯನ್ನು ಠೇವಣಿದಾರರ ಖಾತೆಗೆ ಮಾಸಿಕವಾಗಿ ಪಾವತಿಸಲಾಗುತ್ತದೆ.
ಐದು ವರ್ಷಗಳ ಆರ್ಡಿ ಬಡ್ಡಿದರವನ್ನು ಶೇ. 5.8ರಿಂದ 5.3ಕ್ಕೆ ಇಳಿಸಲಾಗಿದ್ದು, ಶೇಕಡಾ ಅರ್ಧದಷ್ಟು ಕಡಿತವಾದಂತಾಗಿದೆ.
ಉಳಿತಾಯ ಠೇವಣಿ ಹಾಗೂ ಎಫ್‌ಡಿಗಳ ಹೊಸ ಬಡ್ಡಿದರಗಳು ಹೀಗಿವೆ:
- 2021-22ರ ಆರ್ಥಿಕ ವರ್ಷದ ಮೊದಲ ಮೂರು ತಿಂಗಳುಗಳ ಅವಧಿಗೆ ಉಳಿತಾಯ ಠೇವಣಿಗಳ ಬಡ್ಡಿದರ ಶೇ. 4ರಿಂದ ಶೇ. 3.5ಕ್ಕೆ ಇಳಿಕೆ
- ಒಂದು ವರ್ಷದ ಅವಧಿಯ ಠೇವಣಿ (ಎಫ್‌ಡಿ) ಮೇಲಿನ ಬಡ್ಡಿದರ ಶೇ.5.5ರಿಂದ ಶೇ.4.4ಕ್ಕೆ ಇಳಿಕೆ
- ಎರಡು ವರ್ಷಗಳ ಅವಧಿಯ ಠೇವಣಿಗೆ ಶೇ.5.5ರಿಂದ ಶೇ.5ಕ್ಕೆ ಬಡ್ಡಿದರ ಇಳಿಕೆ ಮಾಡಲಾಗಿದ್ದು, ಮೂರು ವರ್ಷಗಳ ಅವಧಿಯ ಠೇವಣಿಗೆ ಶೇ. 5.5ರಿಂದ ಶೇ. 5.1ಕ್ಕೆ ಹಾಗೂ ಐದು ವರ್ಷಗಳ ಅವಧಿಯ ಠೇವಣಿಗೆ ಬಡ್ಡಿದರವನ್ನು ಶೇ.6.7ರಿಂದ ಶೇ. 5.8ಕ್ಕೆ ಇಳಿಸಲಾಗಿದೆ.
ಈ ಹೊಸ ನಿಯಮವು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ: PAN-Aadhaar ಲಿಂಕ್ಗೆ ನೀಡಲಾಗಿದ್ದ ದಿನಾಂಕ ವಿಸ್ತರಣೆ: ಇಲ್ಲಿಯವರೆಗೆ ಕಾಲಾವಕಾಶ..