ಬರೇಲಿ (ಉತ್ತರ ಪ್ರದೇಶ): ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿಯಿಂದ 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿಯ ಸಿಬಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಯಾನ್ (10) ಮೃತ ಬಾಲಕ.
ಮಂಗಳವಾರಂದು ಅಯಾನ್ ತನ್ನ ನಾಲ್ಕೈದು ಸ್ನೇಹಿತರೊಂದಿಗೆ ಮೈದಾನದಲ್ಲಿ ಆಟ ಆಡುತ್ತಿರುವ ವೇಳೆ ಏಕಾಏಕಿ ಬೀದಿ ನಾಯಿಗಳ ಗುಂಪು ಆಟವಾಡುತ್ತಿದ್ದ ಮಕ್ಕಳ ಮೇಲೆ ದಾಳಿ ನಡೆಸಿವೆ. ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಕೆಲವು ಮಕ್ಕಳು ಮರವೇರಿ ಬಚಾವ್ ಆದರೆ ಅಯಾನ್ ಮಾತ್ರ ಕೆಳೆಗೆ ಉಳಿದಿದ್ದ. ಈ ವೇಳೆ ಬೀದಿ ನಾಯಿಗಳು ಆತನನ್ನು ಸುತ್ತುವರೆದು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದವು.
ಮಕ್ಕಳ ಕಿರುಚಾಟ ಕೇಳಿದ ತಕ್ಷಣ ಸುತ್ತಮುತ್ತಲಿನವರು ಓಡಿ ಬಂದಿದ್ದಾರೆ. ಸ್ಥಳಕ್ಕಾಗಮಿಸಿದ ಅಕ್ಕಪಕ್ಕದ ಜನರು ನಾಯಿಗಳನ್ನು ಓಡಿಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅಯಾನ್ನನ್ನು ನಾಯಿಗಳು ಭೀಕರವಾಗಿ ಕಚ್ಚಿ ಗಾಯಗೊಳಿಸಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲೇ ಮೃತಟ್ಟಿದ್ದಾನೆ. ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಾಮಾಚಾರದಲ್ಲಿ ತೊಡಗಿದ ಆರೋಪ: ವೃದ್ಧ ದಂಪತಿಗೆ ಥಳಿಸಿ ಕೊಲೆ