ನವದೆಹಲಿ: ಬಿಹಾರದಲ್ಲಿ 2ನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೂ ಮೊದಲು ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ಮಾಡಿ ಮುಗಿಸಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿಕೂಟದ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ನಡುವೆ ಕಾಂಗ್ರೆಸ್ ನಾಯಕ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಎನ್ಡಿಎ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್ಡಿಎ ನಾಯಕರು ಪ್ರಚಾರದ ವೇಳೆ ನೈಜ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ‘ನೀವು ಬಿಹಾರದ ಮತದಾರರಾಗಿದ್ದರೆ, ಅವರು ಉದ್ಯೋಗ, ಹೊಸ ಕೈಗಾರಿಕೆ, ಆಹಾರ ಧಾನ್ಯಗಳ ಎಂಎಸ್ಪಿ, ಬೆಳೆ ವಿಮೆ, ಪ್ರವಾಹ ಪರಿಹಾರ, ಮಹಿಳೆಯರ ಸುರಕ್ಷತೆ ಇತ್ಯಾದಿಗಳ ಬಗ್ಗೆ ನಿಮಗೆ ಹೇಳುತ್ತಾರೆಯೇ..? ಎಂದು ಪ್ರಶ್ನಿಸಿದ್ದಾರೆ.
ನೀವು ಇಲ್ಲ ಎಂಬ ಉತ್ತರದೊಂದಿಗೆ ಎನ್ಡಿಎಗೆ ಮತಚಲಾಯಿಸಬೇಕಾದ ಪರಿಸ್ಥಿತಿ ಇದೆ. ಆದರೆ, ಪ್ರಧಾನಿ ಮೋದಿ ಅವರು ತಮ್ಮ ಚುನಾವಣಾ ಭಾಷಣದಲ್ಲಿ ರಾಮಮಂದಿರ, ಆರ್ಟಿಕಲ್ 370, ಸಿಎಎ ಹಾಗೂ ಬಿಹಾರದಲ್ಲಿ ಡಬಲ್ ಎಂಜಿನ್ ಸರ್ಕಾರವಿದ್ದರೆ ಇನ್ನೊಂದೆಡೆ ಇಬ್ಬರು ಕಾಡಿನ ರಾಜರು ಇದ್ದರು ಎಂಬಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಹಾರ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ್ದ ಮೋದಿ ‘ಸಿಎಎ ಬಂದಾಗ ವಿರೋಧ ಪಕ್ಷಗಳು ಜನರಲ್ಲಿ ಸುಳ್ಳನ್ನು ಹರಡಿದವು. ನಿಮ್ಮ ಪೌರತ್ವ ಕಸಿದುಕೊಳ್ಳಲಾಗುತ್ತದೆ ಎಂದು ಸುಳ್ಳು ಹಬ್ಬಿಸಿದರು. ಭಾರತೀಯರು ಯಾರಾದರೂ ಪೌರತ್ವ ಕಳೆದುಕೊಂಡಿದ್ದಾರಾ..? ವಿರೋಧ ಪಕ್ಷಗಳು ಯಾವಾಗಲೂ ಜನರನ್ನು ಹೆದರಿಸುವ ಮೂಲಕ ತಮ್ಮ ಸ್ವಾರ್ಥವನ್ನು ಸಾಬೀತುಪಡಿಸಿಕೊಳ್ಳುತ್ತಿವೆ’ ಎಂದು ಆರೋಪಿಸಿದ್ದರು.