ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಾರ್ವಭೌಮತ್ವವನ್ನು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಸೇರಿಸಲಾಗಿದೆ ಎಂದು ಹೇಳಿದ ಸುಪ್ರೀಂ ಕೋರ್ಟ್, ಇದೇ ವೇಳೆ, ಸಂವಿಧಾನದ 370ನೇ ವಿಧಿಯನ್ನು ಎಂದಿಗೂ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳುವುದು ಕಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದೆ. ಮುಖ್ಯ ನಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ ವಿಚಾರಣೆ ಮಾಡುತ್ತಿದೆ.
ವಿಚಾರಣೆಯಲ್ಲಿ ಅರ್ಜಿದಾರರೊಬ್ಬರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಜಾಫರ್ ಷಾ ವಾದ ಮಂಡಿಸಿ, ''ಸಂವಿಧಾನದ 1ನೇ ವಿಧಿಯು ಭಾರತ 'ರಾಜ್ಯಗಳ ಒಕ್ಕೂಟ' ಎಂದು ಹೇಳುತ್ತದೆ. ಹಾಗಾಗಿ, ಅದು ಜಮ್ಮು ಮತ್ತು ಕಾಶ್ಮೀರವನ್ನೂ ಒಳಗೊಂಡಿದೆ ಎಂದು ಹೇಳುತ್ತದೆ. ಆದ್ದರಿಂದ ಸಾರ್ವಭೌಮತ್ವ ಸಂಪೂರ್ಣವಾಗಿದೆ'' ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ''ಭಾರತದ ಪ್ರಭುತ್ವಕ್ಕೆ ಯಾವುದೇ ಷರತ್ತುಬದ್ಧ ಸಾರ್ವಭೌಮತ್ವದ ಶರಣಾಗತಿ ಇರಲಿಲ್ಲ. ಒಮ್ಮೆ ಸಾರ್ವಭೌಮತ್ವವು ಪರಿಪೂರ್ಣವಾಗಿ ಭಾರತದ ಒಕ್ಕೂಟಕ್ಕೆ ದಕ್ಕಿದ ಬಳಿಕ ಶಾಸನ ಜಾರಿಗೊಳಿಸಲು ಸಂಸತ್ತಿನ ಅಧಿಕಾರದ ಮೇಲೆ ಮಾತ್ರ ನಿರ್ಬಂಧ ಅನ್ವಯಿಸುತ್ತವೆ'' ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ 1972ರಲ್ಲಿ ಹೊರಡಿಸಿದ್ದ ಸಂವಿಧಾನಕ್ಕೆ ಸಂಬಂಧಿಸಿದ ಅರ್ಜಿಯ ಆದೇಶವನ್ನು ಉಲ್ಲೇಖಿಸಿದ ಸಿಜೆಐ, 248ನೇ ವಿಧಿಯನ್ನು ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲಾಗಿತ್ತು. ಈ ಮೂಲಕ 248ರ ವಿಧಿಯಲ್ಲಿದ್ದ ಉಳಿಕೆ ಅಧಿಕಾರ ವ್ಯಾಪ್ತಿ ಭಾರತ ಸರ್ಕಾರ ಸೇರಿದೆ.(ಸಂವಿಧಾನದ 248 ವಿಧಿಯು ಎಲ್ಲ ರಾಜ್ಯಗಳು ಉಳಿಕೆ ಅಧಿಕಾರ ವ್ಯಾಪ್ತಿಯಡಿ ಶಾಸನ ರೂಪಿಸುವ ಅವಕಾಶ ಒದಗಿಸುತ್ತದೆ).
ಹಾಗಾಗಿ, ದೇಶದ ಸಾರ್ವಭೌಮತೆ, ಸಮಗ್ರತೆಗೆ ಅಡ್ಡಿ ಉಂಟು ಮಾಡುವುದರ ವಿರುದ್ಧ ಕಾನೂನು ರೂಪಿಸುವ ಸಂಪೂರ್ಣವಾದ ಅಧಿಕಾರ ವ್ಯಾಪ್ತಿಯನ್ನು ಸಂಸತ್ತು ಹೊಂದಿದೆ. ಹಾಗಾಗಿ 1972 ರ ಆದೇಶ ದೇಶದ ಸೌರ್ವಭೌಮತೆಯು ಸಂಪೂರ್ಣವಾಗಿ ಭಾರತ ಸರ್ಕಾರಕ್ಕೆ ಸೇರಿದ್ದಾಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದರು. ಇದೇ ವೇಳೆ ಪೀಠವು, ಜಮ್ಮು ಕಾಶ್ಮೀರಕ್ಕೆ ಸದ್ಯ ಹೊಂದಿಕೆಯಾಗುವ 248ನೇ ವಿಧಿಯು ಈ ಹಿಂದೆ 2019ರ ಆಗಸ್ಟ್ 5ರ ಮೊದಲಿಗೂ ಅನ್ವಯಿಸುತ್ತದೆ.
ಇಗೇ ವೇಳೆ, ನ್ಯಾ. ಖನ್ನಾ ಅವರು ವಕೀಲ ಶಾ ಅವರಿಗೆ, ಭಾರತದ ಸಂವಿಧಾನ ಶ್ರೇಷ್ಠವೇ ಅಥವಾ ಜಮ್ಮು ಕಾಶ್ಮೀರದ ಸಂವಿಧಾನ ಶ್ರೇಷ್ಠವೇ ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಶಾ, ಭಾರತದ ಸಂವಿಧಾನವೇ ಶ್ರೇಷ್ಠ ಎಂದರು.