ಅಮೃತಸರ(ಪಂಜಾಬ್) : 2003ರಲ್ಲಿ ಜಮ್ಮುವಿನ ಸಾಂಬಾ ಜಿಲ್ಲೆಯಿಂದ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಅಕ್ರಮ ಪ್ರವೇಶ ಮಾಡಿದ್ದ ಜಮ್ಮುವಿನ ದೋಡಾ ಜಿಲ್ಲೆಯ ಧರಂಸಿಂಗ್ ಅವರನ್ನು ಪಾಕಿಸ್ತಾನ ರೇಂಜರ್ಸ್ ಮೂರು ವರ್ಷಗಳ ಕಾಲ ವಿಚಾರಣೆಗೊಳಪಡಿಸಿ ನಂತರ ಬಂಧಿಸಿತು.
ಆರಂಭದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿದ್ದರೂ, ಅದನ್ನು 14 ವರ್ಷಗಳ ಜೈಲು ಶಿಕ್ಷೆಗೆ ಬದಲಿಸಲಾಯ್ತು. ಇದೀಗ ಶಿಕ್ಷೆ ಪೂರ್ಣಗೊಂಡ ನಂತರ ಅವರನ್ನು ಇಂದು ವಾಗಾ-ಅಟ್ಟಾರಿ ಗಡಿಯ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ.
ಗಡಿಯಲ್ಲಿ ನಿಯೋಜಿಸಲ್ಪಟ್ಟಿದ್ದ ಪ್ರೋಟೋಕಾಲ್ ಅಧಿಕಾರಿ ಅರುಣ್‌ಪಾಲ್ ಅವರ ಪ್ರಕಾರ, 18 ವರ್ಷದವರಾಗಿದ್ದ ಧರಂಸಿಂಗ್ ಆಕಸ್ಮಿಕವಾಗಿ 2003ರಲ್ಲಿ ಗಡಿ ದಾಟಿ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದರು.
ಸದ್ಯ ಭಾರತಕ್ಕೆ ಮರಳಿರುವ ಸಿಂಗ್ ಅವರನ್ನು ಅಮೃತಸರದ ಗುರುನಾನಕ್ ಆಸ್ಪತ್ರೆಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು.