ಅಯೋಧ್ಯಾ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವು ವೇಳಾಪಟ್ಟಿಯಂತೆ ನಡೆಯುತ್ತಿದೆ ಮತ್ತು 2023ರ ವೇಳೆಗೆ ಭಕ್ತರು ಶ್ರೀರಾಮನ ದರ್ಶನ ಪಡೆಯಬಹುದು ಎಂದು ರಾಮ ಮಂದಿರ ಟ್ರಸ್ಟ್ ಮೂಲಗಳು ತಿಳಿಸಿವೆ.
ರಾಮಮಂದಿರ ನಿರ್ಮಾಣದ ಪರಿಶೀಲನಾ ಸಭೆ ಆಗಸ್ಟ್ 27ರಿಂದ ಆಗಸ್ಟ್ 29ರವರೆಗೆ ನಡೆದಿದೆ. ಈ ಪರಿಶೀಲನಾ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಜೊತೆಗೆ 2023ರ ವೇಳೆಗೆ ದೇವಾಲಯಕ್ಕೆ ಭಕ್ತರ ಪ್ರವೇಶ ಕಲ್ಪಿಸಲು ನಿರ್ಧಾರ ಮಾಡಲಾಗಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.
ರಾಮ ಮಂದಿರ ಟ್ರಸ್ಟ್ ಮೂಲಗಳ ಪ್ರಕಾರ, ಪಾರ್ಕೋಟಾ(ದೇವಾಲಯದ ಸುತ್ತಲೂ ಬಲವಾದ ಗೋಡೆ) ಹೊರಗಿನ ಆವರಣಕ್ಕಾಗಿ ಪ್ರಾಥಮಿಕವಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ವಿನ್ಯಾಸ ಮತ್ತು ಡ್ರಾಯಿಂಗ್ ಕೆಲಸಗಳು ಪೂರ್ಣಗೊಂಡಿವೆ. ಯಾತ್ರಾ ಸೌಲಭ್ಯ ಕೇಂದ್ರ, ಮ್ಯೂಸಿಯಂ, ಆರ್ಕೈವ್ಸ್, ಆಡಿಟೋರಿಯಂ, ಗೋಶಾಲೆ, ಯಜ್ಞ ಶಾಲೆ, ಇತ್ಯಾದಿಗಳನ್ನು ಈ ಆವರಣ ಒಳಗೊಳ್ಳಲಿದೆ.
ಪರಿಸರ ಸ್ನೇಹಿಯಾಗಿ ಆವರಣವನ್ನು ನಿರ್ಮಿಸಲಾಗುತ್ತಿದೆ. ಮಾಸ್ಟರ್ ಪ್ಲಾನ್ ಅನ್ನು ಅಂತಿಮಗೊಳಿಸಲು ಸಂತರು ಮತ್ತು ಸಾಧುಗಳ ಸಲಹೆಗಳನ್ನು ಪರಿಗಣಿಸಲಾಗುತ್ತಿದೆ. ದೇವಾಲಯದ ನಿರ್ಮಾಣದಲ್ಲಿ ಸುಮಾರು 4 ಲಕ್ಷ ಘನ ಅಡಿಗಳಷ್ಟು ಕಲ್ಲುಗಳನ್ನು ಬಳಸಲಾಗುವುದು ಎಂದು ಮೂಲಗಳು ತಿಳಿಸಿವೆ.
ದೇವಾಲಯದ ನಿರ್ಮಾಣದಲ್ಲಿ ಯಾವುದೇ ಉಕ್ಕನ್ನು ಬಳಸಲಾಗುವುದಿಲ್ಲ. ದೇವಾಲಯದ ಪಾರ್ಕೋಟಕ್ಕೆ ಜೋಧಪುರದ ಕಲ್ಲನ್ನು ಬಳಸಲು ನಿರ್ಧರಿಸಲಾಗಿದೆ. ಪಾರ್ಕೋಟಾದ ವಿನ್ಯಾಸವನ್ನು ಸಹ ಅಂತಿಮಗೊಳಿಸಲಾಗಿದೆ ಎಂದು ಟ್ರಸ್ಟ್ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಬಾರಾಬಂಕಿಯಲ್ಲಿ ದೂರು