ಪುಣೆ(ಮಹಾರಾಷ್ಟ್ರ): ಭಗವಾನ್ ಗಣೇಶನ ಪರಮಭಕ್ತರೊಬ್ಬರು 10 ಕೆ.ಜಿ ಚಿನ್ನದ ಕಿರೀಟವನ್ನು ದಗ್ಡುಶೇತ್ ಹಲವಾಯಿ ಗಣಪತಿಗೆ ಅರ್ಪಿಸಿದ್ದಾರೆ. ಈ ಕಿರೀಟದ ಬೆಲೆ ಸುಮಾರು 6 ಕೋಟಿ ರೂಪಾಯಿ.
ಈ ಕಿರೀಟದಲ್ಲಿ ವಿವಿಧ ರೀತಿಯ ಕಸೂತಿ ಮಾಡಲಾಗಿದ್ದು ಆಕರ್ಷಕ ಕೆತ್ತನೆಗಳಿಂದ ಕೂಡಿದೆ. ಗಣೇಶೋತ್ಸವದ ಮೊದಲ ದಿನ ಈ ಕಿರೀಟವನ್ನು ಗಣಪನಿಗೆ ತೊಡಿಸಲಾಗಿದೆ. ಈ ಚಿನ್ನದ ಕಿರೀಟವನ್ನು ಸಮರ್ಪಿಸಿದವರ ಹೆಸರನ್ನು ದೇವಸ್ಥಾನ ಆಡಳಿತ ಗೌಪ್ಯವಾಗಿರಿಸಿದೆ.
10 ಕೆಜಿ ಚಿನ್ನದ ಕಿರೀಟ:
ಭಕ್ತರು ಈ ಶ್ರೀಮಂತ ದಗ್ಡುಶೇತ್ ಹಲವಾಯಿ ಗಣಪತಿಯಲ್ಲಿ ವಿಶೇಷ ನಂಬಿಕೆ ಇಟ್ಟಿದ್ದಾರೆ. ಹಾಗಾಗಿಯೇ ವಿಘ್ನ ನಿವಾರಕನ ಪಾದಪೂಜೆಗೆಂದೇ ದೇಶ -ವಿದೇಶಗಳ ಭಕ್ತರು ಸನ್ನಿಧಾನಕ್ಕೆ ಬರುತ್ತಾರೆ. ಇಷ್ಟಾರ್ಥಿ ಸಿದ್ಧಿಸಿದ ಹಿನ್ನೆಲೆಯಲ್ಲಿ 10 ಕೆ.ಜಿ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಭಕ್ತರು ಆನ್‌ಲೈನ್ ದರ್ಶನದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ:
ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರ ಪ್ರವೇಶಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿದೆ. ದರ್ಶನಕ್ಕೆ ಬರುವ ಭಕ್ತರು ಹೂ, ತೆಂಗಿನಕಾಯಿ ತರುವಂತಿಲ್ಲ. ಭಕ್ತರಿಗೆ ಪ್ರಸಾದ ನೀಡಲಾಗುವುದಿಲ್ಲ. ಆದ್ದರಿಂದ, ಹಬ್ಬದ ಸಮಯದಲ್ಲಿ ಭಕ್ತರು ಗುಂಪುಗೂಡಬಾರದು. ಆನ್‌ಲೈನ್ ದರ್ಶನ ಸೌಲಭ್ಯದ ಲಾಭವನ್ನು ಪಡೆದುಕೊಳ್ಳಬೇಕು ಎಂದು ದೇವಾಲಯದ ಟ್ರಸ್ಟ್ ಮನವಿ ಮಾಡಿದೆ.