ಶ್ರೀನಗರ(ಜಮ್ಮು ಕಾಶ್ಮೀರ): ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಡಿಲಿಮಿಟೇಷನ್ ಪ್ರಕ್ರಿಯೆ ಆರಂಭವಾಗಿದ್ದು, ಸುಮಾರು 290 ಅಧಿಕಾರಿಗಳ ನಿಯೋಗ ಭೇಟಿಕೊಟ್ಟು ಸುಮಾರು ನಾಲ್ಕು ದಿನಗಳಾಗಿದೆ. ಹಲವರನ್ನು ಭೇಟಿ ಮಾಡಿ, ಸಲಹೆಗಳನ್ನು ನಿಯೋಗ ಪಡೆದುಕೊಳ್ಳುತ್ತಿದೆ.
ಡಿಲಿಮಿಟೇಷನ್ ಆಯೋಗದಲ್ಲಿ ಮುಖ್ಯವಾಗಿ ಅಧ್ಯಕ್ಷೆಯಾದ ರಂಜನಾ ಪ್ರಕಾಶ್ ದೇಸಾಯಿ, ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷ ಸುಶೀಲ್ ಚಂದ್ರ ಮತ್ತು ಜಮ್ಮು ಕಾಶ್ಮೀರದ ಚುನಾವಣಾ ಆಯುಕ್ತ ಕೆ.ಕೆ.ಶರ್ಮಾ ಪಾಲ್ಗೊಂಡಿದ್ದಾರೆ.
ಡಿಲಿಮಿಟೇಷನ್ ಆಯೋಗದ ನಿಯೋಗದ ಸದಸ್ಯರು ಹಲವಾರು ಸಂಘಟನೆಗಳು, ರಾಜಕೀಯ ಪಕ್ಷಗಳು, ಎನ್ಜಿಒಗಳಿಗೆ ಭೇಟಿ ನೀಡಿ ಸಲಹೆಗಳನ್ನು ಪಡೆಯುತ್ತಿದ್ದಾರೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಈಗಾಗಲೇ ಡಿಲಿಮಿಟೇಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಡಿಲಿಮಿಟೇಷನ್ ಆಯೋಗದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ, ಜಮ್ಮು ಕಾಶ್ಮೀರದಲ್ಲಿ ಕ್ಷೇತ್ರಗಳ ವಿಂಗಡಣೆ, ಪಾರದರ್ಶಕ ಮತ್ತು ನ್ಯಾಯಯುತವಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಅಂತಾರೆ, ಇಲ್ಲೊಬ್ಬ ಸ್ನೇಹಿತನನ್ನೇ ಕೊಂದುಬಿಟ್ಟ!
2011ರ ಜನಗಣತಿಯ ಆಧಾರದಂತೆ ಡಿಲಿಮಿಟೇಷನ್ ಮಾಡಲಾಗುತ್ತದೆ. ಇದರ ಜೊತೆಗೆ ಡಿಲಿಮಿಟೇಷನ್ ಕಾಯ್ದೆ, ಜಮ್ಮು ಕಾಶ್ಮೀರದ ಪುನರ್ರಚನೆ ಕಾಯ್ದೆ-2019, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರಾತಿನಿಧ್ಯ ಕಾಯ್ದೆಗಳನ್ನು ಒಳಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಜಮ್ಮು ಕಾಶ್ಮೀರದ ಕೆಲವು ರಾಜಕೀಯ ಪಕ್ಷಗಳು ಡಿಲಿಮಿಟೇಷನ್ ಆಯೋಗದ ಮೇಲೆ ಕೇಂದ್ರ ಸರ್ಕಾರ ಪ್ರಭಾವ ಬೀರಿದೆ ಎಂದು ಆರೋಪಿಸಿವೆ.