ನವದೆಹಲಿ: ಒತ್ತಡ ಅಥವಾ ಕೌಟುಂಬಿಕ ಕಾರಣಕ್ಕಾಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಇಲ್ಲಿನ ಮೆಟ್ರೋ ಟ್ರ್ಯಾಕ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ಮಾಡಿದ್ದಾಳೆ. ಭದ್ರತಾ ಸಿಬ್ಬಂದಿ ಆಕೆಯನ್ನು ರಕ್ಷಿಸಿ ಕುಟುಂಬಸ್ಥರ ವಶಕ್ಕೆ ನೀಡಿದ್ದಾರೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಕೇಂದ್ರ ದೆಹಲಿಯ ಶಾದಿಪುರ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ಸಂಜೆ ವಿದ್ಯಾರ್ಥಿನಿ ಎಲಿವೇಟೆಡ್ ಮೆಟ್ರೋ ಟ್ರ್ಯಾಕ್‌ನಲ್ಲಿ ನಡೆದುಕೊಂಡು ರಸ್ತೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇದನ್ನು ಕಂಡ ಜನರು ಟ್ರ್ಯಾಕ್ ಮೇಲಿಂದ ಹೊರಬರಲು ಕೂಗಿದ್ದಾರೆ. ಆದರೆ, ಆಕೆ ತಾನು ಸಾಯುವುದಾಗಿ ಹೇಳಿ, ಟ್ರ್ಯಾಕ್ ಮೇಲೆಯೇ ನಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೆಟ್ರೋ ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿ ಟ್ರ್ಯಾಕ್ ಮೇಲೆ ನಡೆಯುತ್ತಿದ್ದ ವಿದ್ಯಾರ್ಥಿನಿಯನ್ನು ಹಿಡಿದು ರಕ್ಷಿಸಿದ್ದಾರೆ. ಬಳಿಕ ಆಕೆಯ ಕುಟುಂಬಕ್ಕೆ ಒಪ್ಪಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೃಶ್ಯದಲ್ಲಿ ಆಕೆ ಎಲಿವೇಟೆಡ್ ಮೆಟ್ರೋ ಟ್ರ್ಯಾಕ್ ಮೇಲೆ ನಿಂತಿದ್ದಳು. ತನ್ನ ಕೈಯಲ್ಲಿ ಫೋನ್ ಹಿಡಿದು ಯಾರೊಂದಿಗೋ ಮಾತನಾಡುತ್ತಾ ಬೇಸರಿಸಿಕೊಳ್ಳುತ್ತಿರುವುದು ಸೆರೆಯಾಗಿದೆ.
ಅಧಿಕಾರಿಗಳ ಪ್ರಕಾರ, ಕಾಲೇಜು ವಿದ್ಯಾರ್ಥಿನಿ ಯಾವುದೋ ವಿಷಯಕ್ಕೆ ಪೋಷಕರೊಂದಿಗೆ ಜಗಳವಾಡಿದ್ದಳು. ಇದು ಆಕೆಯಲ್ಲಿ ಅಸಮಾಧಾನ ತಂದಿತ್ತು. ಸಂಜೆ 5:30 ರ ಸುಮಾರಿಗೆ ಆಕೆ ಶಾದಿಪುರ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋದಿಂದ ಕೆಳಗಿಳಿದು ಟ್ರ್ಯಾಕ್ ಮೇಲೆ ನಡೆಯಲು ಪ್ರಾರಂಭಿಸಿದಳು. ಅವಳನ್ನು ನೋಡಿದ ಜನರು ಕೂಗಲು ಪ್ರಾರಂಭಿಸಿದರು. ಹಿಂತಿರುಗಿ ಹೋಗುವಂತೆ ಕೇಳಿದರು. ಆಕೆ ಪ್ರಾಣ ಕಳೆದುಕೊಳ್ಳುವುದಾಗಿ ಬೆದರಿಕೆ ಹಾಕಿದಳು ಎಂದು ತಿಳಿಸಿದರು. ಸದ್ಯ ಆಕೆಯನ್ನು ರಕ್ಷಣೆ ಮಾಡಲಾಗಿದೆ. ನಂತರ ವೈದ್ಯರು ಕೌನ್ಸೆಲಿಂಗ್ ಮಾಡಿ ಪೋಷಕರ ಸುಪರ್ದಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಿನ್ನತೆಗೆ 'ಸ್ನೇಹ' ಸಂಜೀವಿನಿ: ಯಾವ್ಯಾವುದೋ ವಿಚಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಈಗ ಹೆಚ್ಚಿವೆ. ಎಲ್ಲ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ನೀವು ಆತ್ಮಹತ್ಯೆ ಆಲೋಚನೆಗಳನ್ನು ಹೊಂದಿದ್ದರೆ ಅಥವಾ ಸ್ನೇಹಿತರು ಅಂತಹ ಸ್ಥಿತಿಯಲ್ಲಿದ್ದರೆ, ನಿಮಗೆ ಭಾವನಾತ್ಮಕ ಬೆಂಬಲ ಬೇಕಾದರೆ ನಿಮ್ಮೆಲ್ಲಾ ದುಗುಡಗಳನ್ನು ಕೇಳಲು ಸ್ನೇಹ ಫೌಂಡೇಶನ್ ಇದೆ. ಅವರಲ್ಲಿ ನಿಮ್ಮಲ್ಲಿರುವ ಆತಂಕದ ಬಗ್ಗೆ ಹೇಳಿಕೊಳ್ಳಿ. ದಿಢೀರ್ ನಿರ್ಧಾರ ತೆಗೆದುಕೊಳ್ಳುವ ಮುನ್ನ ಒಮ್ಮೆ ಯೋಚಿಸಿ.
ಸ್ನೇಹ ಫೌಂಡೇಶನ್ - 04424640050 (24x7 ಲಭ್ಯವಿದೆ) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿ - 9152987821 ಇದು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಲಭ್ಯವಿರುತ್ತದೆ.
ಇದನ್ನೂ ಓದಿ: ಚಿಕ್ಕಮಗಳೂರು: ಪ್ರಪಾತದಿಂದ ಟೆಕ್ಕಿಯ ಮೃತ ದೇಹ ಮೇಲಕ್ಕೆ ತಂದ ಪೊಲೀಸರು