ನವದೆಹಲಿ: ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕ ಜನಶಕ್ತಿ ಪಕ್ಷದ ಸಂಸದ ಪ್ರಿನ್ಸ್ ರಾಜ್ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆಯೇ ಸಂಸದ ಪ್ರಿನ್ಸ್ ರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತನ್ನ ಸೋದರ ಸಂಬಂಧಿ ಪ್ರಿನ್ಸ್ ರಾಜ್ ವಿರುದ್ಧದ ಆರೋಪವನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪದಡಿ ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್ ಹೆಸರನ್ನೂ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಿನ್ಸ್ ರಾಜ್ ವಿರುದ್ಧ ನವದೆಹಲಿಯ ಕನ್ನಾಟ್ ಪ್ಲೇಸ್ ಠಾಣಾ ಪೊಲೀಸರಿಗೆ ಯುವತಿಯೊಬ್ಬಳು ದೂರು ನೀಡಿದ್ದಳು. ಚಿರಾಗ್ ಪಾಸ್ವಾನ್ ಚಿಕ್ಕಪ್ಪ ರಾಮಚಂದ್ರ ಪಾಸ್ವಾನ್ ಪುತ್ರ ಪ್ರಿನ್ಸ್ ರಾಜ್. ಮದ್ಯ ಸೇವಿಸಿ ಪ್ರಜ್ಞೆ ತಪ್ಪಿದಾಗ ಪ್ರಿನ್ಸ್ ರಾಜ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದರೂ, ಎಫ್ಐಆರ್ ದಾಖಲಾಗಿರಲಿಲ್ಲ.
2021ರ ಫೆಬ್ರವರಿ 10ರ ಎಫ್ಐಆರ್ನಲ್ಲಿ ರಾಜ್, ಮಹಿಳೆ ಹನಿಟ್ರ್ಯಾಪ್ ಮೂಲಕ ನನಗೆ ವಂಚಿಸಿ 1 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಳು. ಸಾರ್ವಜನಿಕವಾಗಿ ಮಾನಹಾನಿಯಾಗುವ ಭಯದಲ್ಲಿ ನಾನು ಅವರಿಗೆ 2 ಲಕ್ಷ ರೂಪಾಯಿಗಳನ್ನು ನೀಡಿದ್ದೇನೆ. ನನ್ನಿಂದ ಹೆಚ್ಚಿನ ಹಣ ವಸೂಲಿ ಮಾಡಲು ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಲೇ ಇದ್ದಳು ಎಂದು ಪ್ರಿನ್ಸ್ ರಾಜ್ ಆರೋಪಿಸಿದ್ದರು. ಬಳಿಕ ಅವರಿಗೆ ದೆಹಲಿ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಸಂತ್ರಸ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಸೆಪ್ಟೆಂಬರ್ 9 ರಂದು ಪ್ರಿನ್ಸ್ ರಾಜ್ ಮತ್ತು ಆತನ ಸಹೋದರ ಚಿರಾಗ್ ಪಾಸ್ವಾನ್ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶಿಸಿತು. ಈ ಹಿನ್ನೆಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಪೊಲೀಸರ ಭರ್ಜರಿ ಬೇಟೆ: 800 ಕೆಜಿ ಕ್ಯಾನಬೀಸ್ ವಶ, 5 ಮಂದಿ ಅರೆಸ್ಟ್
ಸಂತ್ರಸ್ತೆ ದೂರಿನಲ್ಲಿ ತಾನು ಪಕ್ಷದ ಕಚೇರಿಯಲ್ಲಿ ಪ್ರಿನ್ಸ್ ಪಾಸ್ವಾನ್ ಅವರನ್ನು ಒಂದು ವರ್ಷದ ಹಿಂದೆ ಭೇಟಿಯಾಗಿದ್ದೆ. ಅದರ ನಂತರ, ನಾವು ಆಗಾಗ ಭೇಟಿಯಾಗುತ್ತಿದ್ದೆವು. ಕಾರ್ಯಕ್ರಮವೊಂದರಲ್ಲಿ ನಾನು ಹೆಚ್ಚಾಗಿ ಮದ್ಯ ಸೇವಿಸಿದ್ದೆ. ಈ ಸಮಯದಲ್ಲಿ ಅವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಉಲ್ಲೇಖಿಸಿದ್ದಾಳೆ. ಅಲ್ಲದೇ ತನ್ನ ಅಶ್ಲೀಲ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಪದೇ ಪದೆ ಅವರು ಬೆದರಿಕೆ ಹಾಕಿ, ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದೂ ಯುವತಿ ಆರೋಪಿಸಿದ್ದಾರೆ.