ನವದೆಹಲಿ: ಬುರಾರಿ ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹಿಂದೂ ಮಹಾಪಂಚಾಯತ್‌ನಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪೊಲೀಸರಿಂದ ಸೂಕ್ತ ಅನುಮತಿ ಪಡೆಯದೆ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಕಾರ್ಯಕ್ರಮದ ಆಯೋಜಕರು, ಸೇವ್ ಇಂಡಿಯಾ ಫೌಂಡೇಶನ್‌ನ ಸಂಸ್ಥಾಪಕ ಪ್ರೀತ್ ಸಿಂಗ್ ವಿರುದ್ಧ ಪೊಲೀಸರು ಮೊದಲ ಎಫ್‌ಐಆರ್ ದಾಖಲಿಸಿದ್ದಾರೆ. ಸಮಾರಂಭದಲ್ಲಿ ಹಾಜರಿದ್ದ ಪತ್ರಕರ್ತರನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೂ ಎರಡನೇ ಎಫ್‌ಐಆರ್, ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ (ದ್ವೇಷ ಭಾಷಣ) ಹರಡಿದ್ದಕ್ಕಾಗಿ ಮೂರನೇ ಎಫ್‌ಐಆರ್ ದಾಖಲಿಸಲಾಗಿದೆ.
ಹಿಂದೂ ಮಹಾಪಂಚಾಯತ್ ಸಭೆಯನ್ನು ಆಯೋಜಿಸಲು ಅನುಮತಿ ಕೋರಿ ಸೇವ್ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಪ್ರೀತ್ ಸಿಂಗ್ ಸಲ್ಲಿಸಿದ ಮನವಿ ಪತ್ರವನ್ನು ವಾಯವ್ಯ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಲಾಗಿದೆ. ಆದರೆ ಆ ಕೋರಿಕೆಯನ್ನು ವಾಯುವ್ಯ ಜಿಲ್ಲಾ ಪೊಲೀಸರು, ಬುರಾರಿ ಮೈದಾನದಲ್ಲಿ ಸಭೆ ಆಯೋಜಿಸಲು ಭೂ ಮಾಲೀಕತ್ವದ ಏಜೆನ್ಸಿ ಅಂದರೆ ಡಿಡಿಎಯಿಂದ ಯಾವುದೇ ಅನುಮತಿಯನ್ನು ಪಡೆದಿರದ ಕಾರಣ ನಿರಾಕರಿಸಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪ್ರೀತ್ ಸಿಂಗ್ ಅವರು ಅನುಮತಿ ಸಿಗದೇ ಇದ್ದರೂ ಹಿಂದೂ ಮಹಾಪಂಚಾಯತ್ ಸಭೆಯನ್ನು ನಡೆಸಿದ್ದಾರೆ. ಸುಮಾರು 800 ಜನರು ಇದರಲ್ಲಿ ಭಾಗವಹಿಸಿದ್ದಾರೆ. ದಾಸ್ನಾದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಸರಸ್ವತಿ ಮತ್ತು ಸುದರ್ಶನ ನ್ಯೂಸ್‌ನ ಮುಖ್ಯ ಸಂಪಾದಕ ಸುರೇಶ್ ಚೌಹಾಂಕೆ ಸೇರಿದಂತೆ ಕೆಲವು ಭಾಷಣಕಾರರು ಎರಡು ಸಮುದಾಯಗಳ ನಡುವೆ ಅಸಮಂಜಸ ದ್ವೇಷ ಭಾವನೆಗಳನ್ನು ಉತ್ತೇಜಿಸುವ ಮಾತುಗಳನ್ನಾಡಿದ್ದಾರೆ ಎಂದು ಪೊಲೀಸರು ಹೇಳಿದರು.
ಕಾರ್ಯಕ್ರಮವನ್ನು ವರದಿ ಮಾಡಲು ಬಂದಿದ್ದ ನ್ಯೂಸ್ ಪೋರ್ಟಲ್‌ನ ಇಬ್ಬರು ಪತ್ರಕರ್ತರಿಂದ ಪಿಎಸ್ ಮುಖರ್ಜಿ ನಗರದಲ್ಲಿ ದೂರು ದಾಖಲಾಗಿದೆ. ಅವರು ತಮ್ಮ ದೂರಿನಲ್ಲಿ ಏಪ್ರಿಲ್ 3ರಂದು ಮಧ್ಯಾಹ್ನ 1.30ರ ಸುಮಾರಿಗೆ ಕಾರ್ಯಕ್ರಮದಿಂದ ಹೊರಗಡೆ ಹೋಗುತ್ತಿರುವ ಸಂದರ್ಭ ಒಂದು ಗುಂಪು ಅವರ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಫೋನ್ ಮತ್ತು ಐ-ಕಾರ್ಡ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿರುವುದಾಗಿ ಆರೋಪಿಸಿದ್ದಾರೆ.
ಮತ್ತೊಬ್ಬ ಫ್ರೀಲಾನ್ಸ್ ಪತ್ರಕರ್ತನಿಂದ ದೂರು ದಾಖಲಾಗಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಇತರ ಇಬ್ಬರು ಪತ್ರಕರ್ತರೊಂದಿಗೆ ಒಬ್ಬ ವ್ಯಕ್ತಿಯನ್ನು ಸಂದರ್ಶಿಸುತ್ತಿದ್ದಾಗ ಕೆಲವು ವ್ಯಕ್ತಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದರು.
ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಯತಿ ನರಸಿಂಹಾನಂದ ಅವರು ಭಾನುವಾರ ಹಿಂದೂಗಳಿಗೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದಾರೆ. ಮತ್ತು ಮುಸ್ಲಿಂ ವ್ಯಕ್ತಿ ದೇಶದ ಪ್ರಧಾನಿಯಾದರೆ ಶೇ 50 ಹಿಂದೂಗಳು ಮತಾಂತರಗೊಳ್ಳುತ್ತಾರೆ ಮತ್ತು ಶೇ. 40 ಜನರನ್ನು ಕೊಲ್ಲಲಾಗುತ್ತದೆ ಬಹಿರಂಗ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಭಾರತಕ್ಕೆ ಮುಸ್ಲಿಂ ವ್ಯಕ್ತಿ ಪ್ರಧಾನಿಯಾದರೆ, ಶೇ.50ರಷ್ಟು ಹಿಂದೂಗಳು ಮತಾಂತರ: ಯತಿ ನರಸಿಂಗಾನಂದ್
ಕಳೆದ ವರ್ಷ ಜಂತರ್ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳು ಕೂಗಿದ್ದ ಕಾರ್ಯಕ್ರಮದ ಆಯೋಜಕರಲ್ಲಿ ಪ್ರೀತ್ ಸಿಂಗ್ ಕೂಡ ಒಬ್ಬರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು. ಆದರೆ, ಸದ್ಯ ಪ್ರೀತ್ ಸಿಂಗ್ ಜಾಮೀನಿನ ಮೇಲೆ ಹೊರಗಿದ್ದಾರೆ. ಅದೇ ರೀತಿಯಾಗಿ ಯತಿ ನರಸಿಂಗಾನಂದ್ ಸಹ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ವಿರೋಧಿ ಘೋಷಣೆ ಸಂಬಂಧ ಪ್ರಕರಣದ ಆರೋಪಿಯಾಗಿದ್ದು, ಇವರು ಕೂಡ ಜಾಮೀನಿನ ಮೇಲೆ ಹೊರಗಿದ್ದಾರೆ.