ಪತನಂತಿಟ್ಟ (ಕೇರಳ): ಚೀನಾ ಕಂಪನಿಗಳಿಂದ ಅಕ್ರಮವಾಗಿ ಹಣ ಪಡೆದ ಆರೋಪದ ಮೇರೆಗೆ ಡಿಜಿಟಲ್ ಮಾಧ್ಯಮ ನ್ಯೂಸ್ಕ್ಲಿಕ್ (Newsclick)ಗೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಲ್ಲಿ ಇತ್ತೀಚೆಗಷ್ಟೇ ದೆಹಲಿ ಪೊಲೀಸರು ದಾಳಿ ನಡೆಸಿದ್ದರು. ಕೆಲ ಪತ್ರಕರ್ತರ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಶುಕ್ರವಾರವೂ ದಾಳಿ ನಡೆಸಿದ ದೆಹಲಿ ಪೊಲೀಸರು, ಮಲಯಾಳಿ ಪತ್ರಕರ್ತೆ ಹಾಗೂ ನ್ಯೂಸ್‌ಕ್ಲಿಕ್‌ನ ಮಾಜಿ ಉದ್ಯೋಗಿ ಅನುಷಾ ಪೌಲ್ ಅವರ ಲ್ಯಾಪ್‌ಟಾಪ್ ಮತ್ತು ಫೋನ್ ವಶಪಡಿಸಿಕೊಂಡಿದ್ದಾರೆ.
ಕೊಡುಮೋನ್ ಬಳಿಯ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ದೆಹಲಿ ಪೊಲೀಸರ ಮೂವರು ಸದಸ್ಯರ ತಂಡ ಅನುಷಾ ಪೌಲ್ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತು. ನಂತರ ಲ್ಯಾಪ್‌ಟಾಪ್ ಮತ್ತು ಫೋನ್ ವಶಪಡಿಸಿಕೊಂಡಿದ್ದಾರೆ.
ರೈತರ ಪ್ರತಿಭಟನೆ, ಎನ್‌ಆರ್‌ಸಿ - ಸಿಎಎ ವಿರೋಧಿ ಪ್ರತಿಭಟನೆಗಳು, ಕೇಂದ್ರ ಸರ್ಕಾರದ ಕೋವಿಡ್ 19 ನಿರ್ವಹಣೆ ಸಂಬಂಧ ವರದಿ ಮಾಡಲಾಗಿದೆಯೇ ಎಂಬ ಪ್ರಶ್ನೆಗಳು ನ್ಯೂಸ್‌ಕ್ಲಿಕ್‌ನ ಮಾಜಿ ಉದ್ಯೋಗಿ ಅನುಷಾ ಪೌಲ್ ಅವರಿಗೆ ಎದುರಾಗಿವೆಯಂತೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತು ಆರ್‌ಎಸ್‌ಎಸ್ ವಿರುದ್ಧ ಧ್ವನಿ ಎತ್ತುತ್ತಿದ್ದ ಸಂಸ್ಥೆ ಮತ್ತು ಅದರ ಉದ್ಯೋಗಿಗಳಿಗೆ ಬೆದರಿಕೆ ಹಾಕುವ ರೀತಿಯಿದು ಎಂದು ಅನುಷಾ ಪೌಲ್ ಇದೇ ವೇಳೆ ಆರೋಪಿಸಿದ್ದಾರೆ.
ಕುಟುಂಬ ಸದಸ್ಯರ ಚಿಕಿತ್ಸೆಗಾಗಿ ಅನುಷಾ ಅವರು ಕೇರಳದಲ್ಲಿ ನೆಲೆಸಿದ್ದರು. ಸಿಪಿಐ (ಎಂ)ನ ದೆಹಲಿ ರಾಜ್ಯ ಕಾರ್ಯದರ್ಶಿ ಕೆ ಎಂ ತಿವಾರಿ ಅವರ ಬಗ್ಗೆ ತಿಳಿದಿದೆಯೇ ಎಂದು ದೆಹಲಿ ಪೊಲೀಸರು ನನ್ನನ್ನು ಪ್ರಶ್ನಿಸಿದರು ಎಂದು ಪೌಲ್ ಮಾದ್ಯಮದವರಲ್ಲಿ ತಿಳಿಸಿದ್ದಾರೆ. ಅದಕ್ಕೆ, ನನಗೆ ತಿಳಿದಿದೆ ಎಂದು ಉತ್ತರಿಸಿದೆ. ಅವರು ಸಿಪಿಐ (ಎಂ)ನ ರಾಜ್ಯ ಕಾರ್ಯದರ್ಶಿ. ನಾನು ಸಿಪಿಐ (ಎಂ)ನ ಕಾರ್ಯಕರ್ತೆ. ನಾನು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ ದೆಹಲಿ ಘಟಕದ ರಾಜ್ಯ ಸಮಿತಿ ಸದಸ್ಯೆ (DYFI) ಎಂದು ತಿಳಿಸಿದರು.
ಇದನ್ನೂ ಓದಿ: ನ್ಯೂಸ್ಕ್ಲಿಕ್ ಸಂಸ್ಥಾಪಕ ಪುರಕಾಯಸ್ಥ, ಚಕ್ರವರ್ತಿ ಬಂಧನ ಪ್ರಶ್ನಿಸಿ ಅರ್ಜಿ: ವಿಚಾರಣೆಗೆ ದೆಹಲಿ ಹೈಕೋರ್ಟ್ ಸಮ್ಮತಿ
ಕೇರಳ ಪೊಲೀಸರು ದಾಳಿ ತಂಡದ ಭಾಗವಾಗಿಲ್ಲ. "ಸ್ಥಳೀಯ ಪೊಲೀಸರು ದಾಳಿ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದರು" ಎಂದು ಕೂಡ ಅನುಷಾ ತಿಳಿಸಿದ್ದಾರೆ. ಒಟ್ಟು 46 ಪತ್ರಕರ್ತರು ಮತ್ತು ಆನ್‌ಲೈನ್ ನ್ಯೂಸ್ ಪೋರ್ಟಲ್‌ನಲ್ಲಿ ಸೇವೆ ಸಲ್ಲಿಸಿದವರನ್ನು ವಿಚಾರಣೆಗೊಳಪಡಿಸಿದ ಬಳಿಕ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಹಾಗೂ ಹೆಚ್ ಆರ್ ಡಿಪಾರ್ಟ್ಮೆಂಟ್ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಬಂಧಿಸಿದೆ. ಅವರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ವೆಬ್ ಪೋರ್ಟಲ್ವೊಂದಕ್ಕೆ ಸಂಬಂಧಿಸಿದಂತೆ ವಿವಿಧ ಸ್ಥಳಗಳ ಮೇಲೆ ಪೊಲೀಸರ ದಾಳಿ.. ಶೋಧ