ನವದೆಹಲಿ: ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದಾರೆ. ನೂಪುರ್ ಶರ್ಮಾರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 22 ರಂದು ವಿಚಾರಣೆ ಹಾಜರಾಗಲು ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಅಲ್ಲದೇ ಸರ್ಕಾರವೂ ಕೂಡ ಶರ್ಮಾರ ವಿರುದ್ಧ ತನಿಖೆಗೆ ಸೂಚಿಸಿದೆ. ಇದೀಗ ನೂಪುರ್ ಶರ್ಮಾ ಮತ್ತು ಅವರ ಕುಟುಂಬಕ್ಕೆ ದೆಹಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ತನಗೆ ಬರುತ್ತಿರುವ ಕಿರುಕುಳ ಮತ್ತು ಬೆದರಿಕೆಗಳನ್ನು ಉಲ್ಲೇಖಿಸಿ ಭದ್ರತೆ ಒದಗಿಸುವಂತೆ ನೂಪುರ್ ಶರ್ಮಾ ಪೊಲೀಸರಿಗೆ ಮನವಿ ಮಾಡಿದ್ದರು. ಹೀಗಾಗಿ ನೂಪುರ್ ಶರ್ಮಾ ಮತ್ತು ಅವರ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ವಿವಾದವು ಕೆಲವು ಮುಸ್ಲಿಂ ರಾಷ್ಟ್ರಗಳಿಂದ ಪ್ರತಿಭಟನೆಯೊಂದಿಗೆ ಉಲ್ಭಣಗೊಂಡಿದ್ದರಿಂದ ಬಿಜೆಪಿ ಭಾನುವಾರದಂದು ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ. ದೆಹಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಸಹ ಉಚ್ಛಾಟಿಸಿದೆ.
ಇದನ್ನೂ ಓದಿ: ನೂಪುರ್ ಶರ್ಮಾ ವಿರುದ್ಧ ತನಿಖೆಗೆ ಮುಂಬೈ ಸರ್ಕಾರ ಸೂಚನೆ.. ನೋಟಿಸ್ ನೀಡಿದ ಪೊಲೀಸ್ ಇಲಾಖೆ
ಮುಸ್ಲಿಂ ಗುಂಪುಗಳ ಆಕ್ರೋಶ ಮತ್ತು ಕುವೈತ್, ಕತಾರ್, ಇರಾನ್‌ನಂತಹ ದೇಶಗಳಿಂದ ತೀಕ್ಷ ಪ್ರತಿಕ್ರಿಯೆ ಬರುತ್ತಿದ್ದು, ಬಿಜೆಪಿ ತಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಯಾವುದೇ ಧಾರ್ಮಿಕ ವ್ಯಕ್ತಿತ್ವದ ಅವಮಾನಗಳನ್ನು ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದೆ..