ನವದೆಹಲಿ: ಯುಪಿಎಸ್ಸಿಯ ನಾಗರಿಕಾ ಸೇವಾ ಪರೀಕ್ಷೆಗಳ ಮುಖ್ಯ ಪರೀಕ್ಷೆಯನ್ನು ಮುಂದೂಡಬೇಕು ಎಂಬ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸಲಿದ್ದು, ಮುಖ್ಯ ಪರೀಕ್ಷೆ ನಿಗದಿತ ವೇಳಾಪಟ್ಟಿಯಂತೆ ನಡೆಯುತ್ತದೆಯೇ? ಇಲ್ಲವೇ?ಎಂಬ ಗೊಂದಲಕ್ಕೆ ಅಂತಿಮ ತೆರೆ ಬೀಳಲಿದೆ.
ಒಮಿಕ್ರಾನ್ ಭೀತಿಯಿಂದ ಶಾಲಾ - ಕಾಲೇಜು ಪರೀಕ್ಷೆಗಳನ್ನು ಮುಂದೂಡಲಾಗುತ್ತಿದೆ. ಆದ್ರೆ ಯುಪಿಎಸ್ಸಿ ಮೇನ್ಸ್ ಪರೀಕ್ಷೆಗಳನ್ನು ಮುಂದೂಡಿಕೆ ಮಾಡುತ್ತಿಲ್ಲ. ಈ ಪರೀಕ್ಷೆಗಳನ್ನೂ ಮುಂದೂಡಿಕೆ ಮಾಡಬೇಕು ಎಂದು ಆಗ್ರಹಿಸಿ, ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುಮಾರು 19 ಅಭ್ಯರ್ಥಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಒಮಿಕ್ರಾನ್ ಸೋಂಕು ಎರಡನೇ ಅಲೆಗಿಂತ ವೇಗವಾಗಿ ಹರಡುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಜೀವಕ್ಕೆ ಅಪಾಯ ಎದುರಾಗಬಹುದು ಎಂಬ ಆತಂಕವನ್ನು ಅಭ್ಯರ್ಥಿಗಳು ವ್ಯಕ್ತಪಡಿಸಿದ್ದರು. ಈ ಅರ್ಜಿ ವಿಚಾರಣೆಗೆ ಹೈಕೋರ್ಟ್ ಒಪ್ಪಿಕೊಂಡಿತ್ತು.
ಬುಧವಾರವಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಯುಪಿಎಸ್ಸಿ ಕೊರೊನಾ ಸಾಂಕ್ರಾಮಿಕದಿಂದ ಕೆಲವು ಶಾಲೆಗಳನ್ನು ಬಂದ್ ಮಾಡಿದ್ದರೂ, ಯುಪಿಎಸ್ಸಿ ಮೇನ್ಸ್ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ ನಡೆಯಲಿದೆ ಎಂದು ಸ್ಪಷ್ಟೆ ನೀಡಿತ್ತು. ಇಂದು ಹೈಕೋರ್ಟ್ ವಿಚಾರಣೆ ನಂತರ ಪರೀಕ್ಷೆಯ ಭವಿಷ್ಯ ಗೊತ್ತಾಗಲಿದೆ.
ಯುಪಿಎಸ್ಸಿ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆ ಜನವರಿ 7, 8, 9, 15, 16 ರಂದು ನಡೆಯಲಿದ್ದು ಈಗಾಗಲೇ ವಿವಿಧೆಡೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: Modi Security Breach: ಬ್ಲೂ ಬುಕ್ ಪಾಲಿಸಿಲ್ಲ ಎಂದ ಅಧಿಕಾರಿ.. ಕಾರ್ಯಕರ್ತರಿಗೆ ಥಳಿಸಿ, ಊಟದ ಬಾಕ್ಸ್ ಕಸಿದರು ಎಂದ ಸಂಸದೆ