ನವದೆಹಲಿ: ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸರ್ಕಾರಿ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ ಎಂದು ಪ್ರಶ್ನಿಸಿದ್ದ ಬಿಜೆಪಿ ಶಾಸಕ ಓ.ಪಿ.ಶರ್ಮಾ ಅವರ ಪ್ರಶ್ನೆಗೆ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಉತ್ತರಿಸಿದ್ದು, ಆ ರೀತಿಯ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಡಿಸ್ಪೆನ್ಸರಿಗಳು, ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ವೈದ್ಯರು, ದಾದಿಯರು, ಅರೆವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿಯ ಕೊರತೆಯಿಲ್ಲ ಎಂದು ಜೈನ್ ಹೇಳಿದ್ದಾರೆ. ಸರ್ಕಾರವು ಖಾಲಿ ಇರುವ ಹುದ್ದೆಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ, ಅವುಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ದೆಹಲಿ ಸರ್ಕಾರವು ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, 1,236 ಹುದ್ದೆಗಳಲ್ಲಿ 932 ಸಾಮಾನ್ಯ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಹಾಗೆಯೇ 43 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದ್ದು, 261 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ದೆಹಲಿಯಲ್ಲಿ ಒಂದೇ ದಿನ ₹1 ಕೋಟಿ ದಂಡ ಸಂಗ್ರಹ
1,357 ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗಳಲ್ಲಿ 1,219 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಜೊತೆಗೆ, 44 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗಿದೆ ಮತ್ತು 84 ಜಿಡಿಎಂಒ ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.
ಅಮಾನತು ವಾಪಸ್:
ಕಳೆದ ತಿಂಗಳು ಸದನದಿಂದ ಅಮಾನತುಗೊಂಡಿದ್ದ ಬಿಜೆಪಿ ಶಾಸಕ ಜಿತೇಂದ್ರ ಮಹಾಜನ್ ಅವರ ಅಮಾನತ್ತನ್ನು ದೆಹಲಿ ವಿಧಾನಸಭೆ ಇಂದು ಹಿಂಪಡೆದಿದೆ. ಧ್ವನಿ ಮತದ ನಂತರ ಮಹಾಜನ್ ಅವರ ಅಮಾನತು ರದ್ದುಗೊಂಡಿದೆ. ಅಮಾನತು ರದ್ದುಗೊಳಿಸುವಂತೆ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರಿಗೆ ಮನವಿ ಮಾಡಲಾಗಿತ್ತು.
ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದೆಹಲಿ ವಿಧಾನಸಭೆಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಹಾಜನ್ ಅವರನ್ನು ಅಧಿವೇಶನದಿಂದ ಅಮಾನತುಗೊಳಿಸಿತ್ತು.