ನವದೆಹಲಿ: ರಾಜ್ಯಸಭೆಯಿಂದ ಅಮಾನತುಗೊಂಡ ನಂತರ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಆ್ಯಪ್ನ ತಮ್ಮ ಪ್ರೊಫೈಲ್ ಅನ್ನು ಬದಲಾಯಿಸಿದ್ದಾರೆ. ಮುಂಚಿನ ಪ್ರೊಫೈಲ್‌ನಲ್ಲಿ ಸಂಸತ್ ಸದಸ್ಯರು ಎಂದು ಉಲ್ಲೇಖಿಸಿದ್ದರು. ಆದರೆ, ಅವರೀಗ "ಅಮಾನತುಗೊಂಡ ಸಂಸತ್ ಸದಸ್ಯ" ಎಂದು ಬದಲಾಯಿಸಿಕೊಂಡಿದ್ದಾರೆ.
ಶುಕ್ರವಾರ ಮೆಲ್ಮನೆಯಲ್ಲಿ ದೆಹಲಿ ಸೇವಾ ಮಸೂದೆಯ ಬಗ್ಗೆ ಚರ್ಚೆ ನಡೆಸುವಾಗ "ನಿಯಮಗಳ ಸಂಪೂರ್ಣ ಉಲ್ಲಂಘನೆ, ದುರ್ನಡತೆ, ಧಿಕ್ಕರಿಸುವ ವರ್ತನೆ ಮತ್ತು ಅವಹೇಳನಕಾರಿ ನಡತೆ" ಗಾಗಿ ರಾಜ್ಯಸಭೆಯಿಂದ ಚಡ್ಡಾ ಅವರನ್ನು ಅಮಾನತುಗೊಳಿಸಲಾಗಿದೆ. ದೆಹಲಿ ಸರ್ಕಾರದ ತಿದ್ದುಪಡಿ ಮಸೂದೆ- 2023ರ ಕುರಿತಾದ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ಒಪ್ಪಿಗೆಯಿಲ್ಲದೇ ಮೇಲ್ಮನೆಯ ಕೆಲವು ಸದಸ್ಯರ ಹೆಸರನ್ನು ಸೇರಿಸಿದ್ದಕ್ಕಾಗಿ ಎಎಪಿ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭಾನಾಯಕ ಪೀಯೂಷ್ ಗೋಯಲ್ ಅವರು ನಿರ್ಣಯ ಮಂಡಿಸಿದ್ದರು.
ರಾಜ್ಯಸಭೆಯಿಂದ ಅಮಾನತುಗೊಂಡಿರುವ ಕುರಿತು ಮಾತನಾಡಿರುವ ರಾಘವ್ ಚಡ್ಡಾ, "ತಮ್ಮನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಿರುವುದು ಬಿಜೆಪಿ ಯುವಜನರಿಗೆ ನೀಡಿರುವ ಬಲವಾದ ಸಂದೇಶವಾಗಿದೆ, ನೀವು ಪ್ರಶ್ನೆಗಳನ್ನು ಕೇಳಲು ಧೈರ್ಯಮಾಡಿದರೆ, ನಾವು ನಿಮ್ಮ ಧ್ವನಿಯನ್ನು ಅಡಗಿಸುತ್ತೇವೆ. ನನ್ನ ಭಾಷಣದ ಸಮಯದಲ್ಲಿ ಕಠಿಣ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ನನ್ನನ್ನು ಅಮಾನತುಗೊಳಿಸಲಾಗಿದೆ. ಏಕೆಂದರೆ ನನ್ನ ಪ್ರಶ್ನೆಗಳಿಗೆ ವಿಶ್ವದ ಅತಿ ದೊಡ್ಡ ಪಕ್ಷ ಬಿಜೆಪಿಯ ಬಳಿ ಉತ್ತರವಿರಲಿಲ್ಲ. ದೆಹಲಿ ರಾಜ್ಯ ಸ್ಥಾನಮಾನದ ಬಗ್ಗೆ ಬಿಜೆಪಿಯ ದ್ವಂದ್ವ ನೀತಿಯನ್ನು ಬಯಲಿಗೆಳೆದದ್ದೇ ನನ್ನ ಅಪರಾಧ" ಎಂದು ಅವರು ಟ್ವೀಟ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವ ಮತ್ತು ಪರಿಣಾಮಕಾರಿ ಸಂಸತ್ ಸದಸ್ಯರನ್ನು ಸುಳ್ಳು ಆರೋಪಗಳ ಆಧಾರದ ಮೇಲೆ ಸರ್ಕಾರ ಅಮಾನತುಗೊಳಿಸಿರುವುದು ಸ್ಪಷ್ಟವಾಗಿ ಅಪಾಯಕಾರಿ ಸಂಕೇತವಾಗಿದೆ ಎಂದು ರಾಘವ್ ಹೇಳಿದ್ದಾರೆ. ಈ ಕ್ರಮವು ಯುವಕರ ವಿರೋಧಿಯಾಗಿದೆ ಮತ್ತು ನ್ಯಾಯಯುತ ಪ್ರಾತಿನಿಧ್ಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಅಡಿಪಾಯವನ್ನು ಹಾಳುಮಾಡುತ್ತದೆ. ಆಮ್ ಆದ್ಮಿ ಪಕ್ಷ ಮತ್ತು ಇತರ ಭಾರತೀಯ ಸಂಸದರ ಅಮಾನತು ಸಂಸತ್ತಿನಲ್ಲಿ ಆತಂಕಕಾರಿ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಅವರು ಇದೇ ವೇಳೆ ಆರೋಪಿಸಿದ್ದಾರೆ.
ಜುಲೈ 20 ರಂದು ಆರಂಭಗೊಂಡು ಶುಕ್ರವಾರ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಿಂದ ಅಮಾನತುಗೊಂಡ ಎರಡನೇ ಎಎಪಿ ಸಂಸದರಾಗಿದ್ದಾರೆ. ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್ ಅವರನ್ನು ಜುಲೈ 24 ರಂದು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.
ಮುಂಗಾರು ಅಧಿವೇಶನವು ಸರ್ಕಾರದಿಂದ ಅಧಿಕಾರ ದುರುಪಯೋಗಕ್ಕೆ ಸಾಕ್ಷಿಯಾಗಿದೆ ಎಂದು ರಾಘವ್ ಚಡ್ಡಾ ಆರೋಪಿಸಿದ್ದಾರೆ. ಮೈಕ್ರೊಫೋನ್‌ಗಳನ್ನು ಬಲವಂತವಾಗಿ ಮೌನಗೊಳಿಸಲಾಯಿತು ಮತ್ತು ವಿರೋಧದ ಧ್ವನಿಗಳನ್ನು ಹತ್ತಿಕ್ಕಲಾಯಿತು. ಆಮ್ ಆದ್ಮಿ ಪಕ್ಷದ 3 ಸಂಸದರನ್ನು ಅಮಾನತುಗೊಳಿಸಲಾಗಿದೆ. ಬಿಜೆಪಿಯು ತನ್ನ ಅಸಾಧಾರಣ ಶಕ್ತಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಾರತವು ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಾದ ನೀತಿ ಹೊಂದಿದೆ: ಪ್ರಧಾನಿ ಮೋದಿ