ಚೆನ್ನೈ/ನವದೆಹಲಿ: ನಾಪತ್ತೆಯಾದ ಸುಮಾರು ಏಳು ವರ್ಷಗಳ ಬಳಿಕ ಭಾರತೀಯ ವಾಯುಪಡೆಯ AN 32 ಸಾರಿಗೆ ವಿಮಾನದ ಅವಶೇಷಗಳು ಚೆನ್ನೈ ಕರಾವಳಿಯಿಂದ 310 ಕಿಮೀ ದೂರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಸುಮಾರು 3.5 ಕಿ.ಮೀ ಆಳದಲ್ಲಿ ಪತ್ತೆಯಾಗಿವೆ ಎಂದು ಭಾರತೀಯ ವಾಯುಪಡೆ ಶುಕ್ರವಾರ ತಿಳಿಸಿದೆ.
ಟೇಕಾಫ್ ಆದ ಕೆಲವೇ ಹೊತ್ತಲ್ಲಿ ನಾಪತ್ತೆಯಾಗಿದ್ದ ವಿಮಾನ: 29 ಸಿಬ್ಬಂದಿಯನ್ನು ಹೊತ್ತು ಚೆನ್ನೈನ ತಾಂಬರಂ ವಾಯುನೆಲೆಯಿಂದ ಅಂಡಮಾನ್- ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್ನಲ್ಲಿರುವ ವಾಯುನೆಲೆಗೆ ಸಾಗುತ್ತಿದ್ದ ವಾಯುಪಡೆಯ ಎಎನ್- 32 ವಿಮಾನವು 2016ರ ಜುಲೈ 22 ರಂದು ಬಂಗಾಳಕೊಲ್ಲಿಯಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು. ಅದಾದ ಏಳು ವರ್ಷಗಳ ಬಳಿಕ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷಿಯನ್ ಟೆಕ್ನಾಲಜಿಯ ಸ್ವಾಯತ್ತ ಜಲಂತರ್ಗಾಮಿ ವಾಹನವು (AUV-ಅಟೋನಾಮಸ್ ಅಂಡರ್ ವಾಟರ್ ವೆಹಿಕಲ್) ಚೆನ್ನೈನ ತಾಂಬರಂ ವಾಯುನೆಲೆಯಿಂದ ಸಮುದ್ರದಲ್ಲಿ ಸುಮಾರು 310 ಕಿ.ಮೀ. ದೂರದಲ್ಲಿ ಸಮುದ್ರದ ತಳದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಿದೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಎಎನ್-32 ನಲ್ಲಿ ಆರು ವಿಮಾನ ಸಿಬ್ಬಂದಿ ಹಾಗೂ 23 ವಾಯುಪಡೆ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. 11 ಐಎಎಫ್, ಇಬ್ಬರು ಭಾರತೀಯ ಸಿಬ್ಬಂದಿ, ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ, ಭಾರತೀಯ ನೌಕಾಪಡೆಯ ಒಬ್ಬ ನಾವಿಕ ಹಾಗೂ ನೌಕಾಪಡೆಯೊಂದಿಗೆ ಕೆಲಸ ಮಾಡುವ ಎಂಟು ಸಿಬ್ಬಂದಿ ಅದರಲ್ಲಿದ್ದರು. ಜುಲೈ 22 ರಂದು ಬೆಳಗ್ಗೆ 8.30ಕ್ಕೆ ತಾಂಬರಂ ವಾಯುನೆಲೆಯಿಂದ ಹೊರಟಿದ್ದ ವಿಮಾನ ಬೆಳಗ್ಗೆ 11.45ಕ್ಕೆ ಪೋರ್ಟ್ಬ್ಲೇರ್ಗೆ ತಲುಪಬೇಕಿತ್ತು. ಆದರೆ ವಿಮಾನ ಟೇಕಾಫ್ ಆದ ಕೆಲವೇ ಹೊತ್ತಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು.
ಅವಶೇಷಗಳನ್ನು ಪತ್ತೆಹಚ್ಚಿದ ವಿಜ್ಞಾನಿಗಳು: "ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIOT) ತರಬೇತಿ ಉದ್ದೇಶದಿಂದ ಸಮುದ್ರದಾಳದಲ್ಲಿ ಸ್ವಾಯತ್ತ ಜಲಾಂತರ್ಗಾಮಿ ವಾಹನದ ಮ್ಯಾಪಿಂಗ್ ಮಾಡುತ್ತಿದ್ದ ವೇಳೆ ಕೆಲವು ಲೋಹದ ಭಾಗಗಳು ಪತ್ತೆಯಾಗಿದ್ದವು. ಪ್ರಾರಂಭದಲ್ಲಿ ಹಡಗಿನ ಅವಶೇಷಗಳಿರಬಹುದು ಎಂದು ಊಹಿಸಿದ್ದ ತಂಡ ನಂತರ ಕುತೂಹಲದಿಂದ ಇನ್ನೂ ಆಳಕ್ಕೆ ತೆರಳಿ ಅವಶೇಷಗಳ ಛಾಯಾಚಿತ್ರಗಳನ್ನು ತೆಗೆದಿತ್ತು. ಆ ಚಿತ್ರಗಳನ್ನು ಭಾರತೀಯ ವಾಯುಪಡೆಗೆ ಕಳುಹಿಸಲಾಗಿತ್ತು. ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಭಾರತೀಯ ವಾಯುಪಡೆ ಅಧಿಕಾರಿಗಳು ಅವು ಏಳು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಎಎನ್ 32 ವಿಮಾನದ ಅವಶೇಷಗಳು ಎಂಬುದನ್ನು ದೃಢಪಡಿಸಿದ್ದಾರೆ" ಎಂದು ಎನ್ಐಒಟಿ ನಿರ್ದೇಶಕ ಜಿ.ಎ.ರಾಮದಾಸ್ ತಿಳಿಸಿದರು.
ರಕ್ಷಣಾ ಸಚಿವಾಲಯದ ಪ್ರಕಾರ: ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIOT) ಎಎನ್ 32 ವಿಮಾನ ಕಾಣೆಯಾದಾಗ ಕೊನೆಯದಾಗಿ ಏರ್ ಟ್ರಾಫಿಕ್ ರೇಡಾರ್ ದಾಖಲಿಸಿದ್ದ ಸ್ಥಳದಲ್ಲಿ ಸ್ವಾಯತ್ತ ಜಲಾಂತರ್ಗಾಮಿ ವಾಹನದ ಮೂಲಕ ಆಳಸಮುದ್ರ ಪರಿಶೋಧನೆ ಕೈಗೊಳ್ಳಲಾಯಿತು. ಮಲ್ಟಿ- ಬೀಮ್ ಸೋನಾರ್(ಸೌಂಡ್ ನ್ಯಾವಿಗೇಷನ್ ಮತ್ತು ರೇಂಜಿಂಗ್), ಸಿಂಥೆಟಿಕ್ ಅಪರ್ಚರ್ ಸೋನಾರ್ ಹಾಗೂ ಹೈ- ರೆಸುಲ್ಯೂಸನ್ ಫೋಟೋಗ್ರಫಿ ಸೇರಿದಂತೆ ಬಹು ಪೆಲೋಡ್ಗಳನ್ನು ಬಳಸಿಕೊಂಡು ಆಳದಲ್ಲಿ ಈ ಹುಡುಕಾಟ ನಡೆಸಲಾಯಿತು.
ಹುಡುಕಾಟದ ಸಂದರ್ಭದ ಚಿತ್ರಗಳನ್ನು ವಿಶ್ಲೇಷಣೆ ಮಾಡಿದಾಗ ಚೆನ್ನೈ ಕರಾವಳಿಯಿಂದ ಸರಿಸುಮಾರು 310 ಕಿ.ಮೀ. ದೂರದಲ್ಲಿ ಅಪಘಾತಕ್ಕೀಡಾದ ವಿಮಾನದ ಅವಶೇಷಗಳು ಇರುವುದು ತಿಳಿದು ಬಂದಿದೆ. ಸದ್ಯ ಅವಶೇಷಗಳು ಪತ್ತೆಯಾಗಿರುವ ಸ್ಥಳದಲ್ಲಿ ಬೇರೆ ಯಾವುದೇ ಇಂತಹ ಅವಘಡಗಳು ಸಂಭವಿಸಿರುವುದಕ್ಕೆ ಯಾವುದೇ ದಾಖಲೆಗಳು ಇಲ್ಲದ ಕಾರಣ ಅವಶೇಷಗಳು AN-32 ವಿಮಾನದ್ದು ಎಂದು ಹೇಳುತ್ತವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ವಿಮಾನಕ್ಕಾಗಿ ನಡೆದಿತ್ತು ತೀವ್ರ ಹುಡುಕಾಟ: ವಿಮಾನ ಕಣ್ಮರೆಯಾಗಿದ್ದ ಸಂದರ್ಭ ಸುಮಾರು ಮೂರು ತಿಂಗಳುಗಳ ಕಾಲ ತನಿಖಾ ತಂಡಗಳು ವಿಮಾನಕ್ಕಾಗಿ, ಹಡಗುಗಳು ಹಾಗೂ ವಿಮಾನಗಳ ಸಹಾಯದಿಂದ ಬೃಹತ್ ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಆದರೆ ಕಾಣೆಯಾದ ಸಿಬ್ಬಂದಿ ಅಥವಾ ವಿಮಾನದ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಶೋಧ ಕಾರ್ಯಾಚರಣೆಗೆ ನೌಕಾಪಡೆಗೆ ಸೇರಿದ 13 ನೌಕೆಗಳು, ಕೋಸ್ಟ್ ಗಾರ್ಡ್ನ ಆರು ಹಡಗುಗಳು ಹಾಗೂ 1 ಜಲಂತರ್ಗಾಮಿ ನೌಕೆಯನ್ನು ಬಳಸಲಾಗಿತ್ತು. ಅದಲ್ಲದೆ ಹುಡುಕಾಟಕ್ಕಾಗಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಸಹಾಯವನ್ನು ಪಡೆಯಲಾಗಿತ್ತು. ಆದರೂ ವಿಮಾನದ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಕ್ಷಮೆಯಾಚಿಸಿ ಪತ್ರ ಬರೆದಿದ್ದ ವಾಯುಪಡೆ: ನಾಪತ್ತೆಯಾದ ವಿಮಾನ ಪತ್ತೆ ಹಚ್ಚಲು ವಿಫಲವಾಗಿದ್ದು, ವಿಮಾನದಲ್ಲಿದ್ದ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸುವುದರ ಹೊರತಾಗಿ ಬೇರೆ ಯಾವುದೇ ದಾರಿ ಇಲ್ಲ ಎಂದು ಭಾರತೀಯ ವಾಯುಪಡೆ ನಾಪತ್ತೆಯಾಗಿದ್ದ ವಿಮಾನದಲ್ಲಿದ್ದ 29 ಸಿಬ್ಬಂದಿಯ ಕುಟುಂಬಕ್ಕೆ ಕ್ಷಮೆಯಾಚಿಸಿ ಪತ್ರ ಬರೆದಿತ್ತು.
ಇದನ್ನೂ ಓದಿ: ದೆಹಲಿಗೆ ಹೊರಟ ವಿಮಾನ ಟೇಕ್ ಆಫ್ ಆದ ಕೆಲ ಹೊತ್ತಲ್ಲೇ ತುರ್ತು ಭೂಸ್ಪರ್ಶ