ಪಾಟ್ನಾ(ಬಿಹಾರ): ವಿಷಪೂರಿತ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ನಾಲ್ವರು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ಕೆಲವರು ಅಸ್ವಸ್ಥರಾಗಿದ್ದು, ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಗೋಪಾಲ್‌ಗಂಜ್ ಜಿಲ್ಲೆಯ ಮೊಹಮದ್ಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ದುರ್ಘಟನೆ ಸಂಭವಿಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೋಪಾಲ್‌ಗಂಜ್ ಜಿಲ್ಲಾಧಿಕಾರಿ ಡಾ. ನವಲ್ ಕಿಶೋರ್ ಚೌಧರಿ ನಿಗೂಢ ಕಾರಣದಿಂದ ಸಾವುಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದ್ದಾರೆ.
ದುರ್ಘಟನೆಯಿಂದ ಸಂತ್ರಸ್ತರಾದವರ ಮನೆಗಳಿಂದ ನಾವು ಸ್ಯಾಂಪಲ್ಗಳನ್ನು ಸಂಗ್ರಹ ಮಾಡಿದ್ದು, ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ಮೇಲೆ ಅವಘಡಕ್ಕೆ ಕಾರಣ ಗೊತ್ತಾಗಲಿದೆ. ಸದ್ಯಕ್ಕೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಈ ಬೆಳವಣಿಗೆಗಳ ನಡುವೆ ಗೋಪಾಲ್‌ಗಂಜ್‌ನ ಎಸ್‌ಡಿಪಿಒ ಸಂಜೀವ್ ಕುಮಾರ್ ಮತ್ತು ಗೋಪಾಲ್‌ಗಂಜ್ ನಗರದ ಅಬಕಾರಿ ಇನ್ಸ್ಪೆಕ್ಟರ್ ರಾಕೇಶ್ ಕುಮಾರ್ ಮೊಹಮದ್ಪುರ ಗ್ರಾಮದ ಮೇಲೆ ದಾಳಿ ನಡೆಸಿ ಕೆಲವರ ಮನೆಗಳಿಂದ ಮದ್ಯದ ಪೊಟ್ಟಣಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಆ ಮನೆಗಳನ್ನು ಜಪ್ತಿ ಮಾಡಿದ್ದಾರೆ.
ಘಟನೆಯಲ್ಲಿ ಪ್ರಮುಖ ಆರೋಪಿಯಾಗಿರುವ ಚತುರಾಮ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ಆತನ ಸಹಚರ ಮಹೇಶ್ ರಾಮ್ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
'ಪ್ರತಿಪಕ್ಷಗಳ ಪಿತೂರಿ': ಉಪಚುನಾವಣೆಯಲ್ಲಿ ಸಿಎಂ ನಿತೀಶ್ ಕುಮಾರ್ ಅವರ ಪಕ್ಷಕ್ಕೆ ಗೆಲುವು ಸಿಕ್ಕಿದ್ದು, ಇದನ್ನ ಸಹಿಸಿಕೊಳ್ಳದ ಪ್ರತಿಕ್ಷಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕಾರಣಕ್ಕಾಗಿ ಈ ಪಿತೂರಿ ನಡೆಸಿವೆ ಎಂದು ಗಣಿ, ಭೂ ವಿಜ್ಞಾನ ಸಚಿವ ಮತ್ತು ಗೋಪಾಲ್‌ಗಂಜ್‌ನ ಬಿಜೆಪಿ ಶಾಸಕ ಜಾನಕ್ ರಾಮ್ ಆರೋಪಿಸಿದ್ದಾರೆ. ಇದರ ಜೊತೆಗೆ ಅಪರಾಧಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ದೀಪಾವಳಿಗೆ ಸಾರ್ವತ್ರಿಕ ರಜೆ ಘೋಷಣೆಗೆ ಒತ್ತಾಯ; ಮಸೂದೆ ಮಂಡನೆ