ಬೆಹ್ರೋರ್(ರಾಜಸ್ಥಾನ): ಇತ್ತೀಚೆಗೆ ತೆರೆ ಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುವ ಜೊತೆಗೆ ಎಲ್ಲೆಡೆಯಿಂದ ಮೆಚ್ಚುಗೆಗೆ ಪಾತ್ರವಾಗಿರುವ ದಿ ಕಾಶ್ಮೀರಿ ಫೈಲ್ಸ್ ಚಿತ್ರದ ಬಗ್ಗೆ ದಲಿತನೋರ್ವ ವಿವಾದಿತ ಪೋಸ್ಟ್ ಮಾಡಿದ್ದಕ್ಕಾಗಿ ಆತನಿಗೆ ಗ್ರಾಮಸ್ಥರು ಅಮಾನವೀಯ ರೀತಿಯ ಶಿಕ್ಷೆ ನೀಡಿದ್ದಾರೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬೆಹ್ರೋರ್ನ ಗೋಕುಲ್ಪುರ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ದಿ ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್ ಮಾಡಿದ್ದಾನೆ. ಇದರ ಬೆನ್ನಲ್ಲೇ ಆತನನ್ನು ಹಿಡಿದು ಕರೆದು ತಂದು ದೇವಸ್ಥಾನದ ಎದುರುಗಡೆ ಗ್ರಾಮಸ್ಥರೆಲ್ಲರೂ ಸೇರಿ ಮೂಗು ಉಜ್ಜಿಸಿದ್ದಾರೆ. ರಾಜಸ್ಥಾನದ ಖಾಸಗಿ ಬ್ಯಾಂಕ್ವೊಂದರಲ್ಲಿ ಸೀನಿಯರ್ ಸೇಲ್ಸ್ ಮ್ಯಾನೇಜರ್ ಆಗಿ ರಾಜೇಶ್ ಮೇಘವಾಲ್ ದಿ ಕಾಶ್ಮೀರಿ ಫೈಲ್ಸ್ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಕಾಶ್ಮೀರಿ ಪಂಡಿತರಿಗೆ ಅನ್ಯಾಯ ಮತ್ತು ಚಿತ್ರಹಿಂಸೆ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ದೇಶದಲ್ಲಿ ದಲಿತ ಸಮುದಾಯವೂ ತಾರತಮ್ಯ ಎದುರಿಸುತ್ತಿದೆ. ಮೋದಿ ಸರ್ಕಾರ ಜೈಭೀಮ್, ಶೂದ್ರ ದಿ ರೈಸಿಂಗ್ ಚಿತ್ರಗಳಿಗೆ ಏಕೆ ತೆರಿಗೆ ವಿನಾಯ್ತಿ ನೀಡಲಿಲ್ಲ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: 'ಹೆಬ್ಬೆಟ್ಟು' ನೀಡುವ ಮುನ್ನ ಎಚ್ಚರ! ವೃದ್ಧೆಯ ಆಸ್ತಿ ಕಬಳಿಸಿದ ಸ್ವಯಂಸೇವಕ
ಇದರ ಜೊತೆಗೆ ಮೀಸೆ ಬಿಟ್ಟಿದ್ದಕ್ಕಾಗಿ ಕಳೆದ ಕೆಲ ತಿಂಗಳ ಹಿಂದೆ ರಾಜಸ್ಥಾನದಲ್ಲಿ ಜಿತೇಂದ್ರ ಮೇಘವಾಲ್ ಹತ್ಯೆ ಮಾಡಲಾಯಿತು. ಇದು ಅನ್ಯಾಯವಲ್ಲವೇ? ನಾನು ಪೋಸ್ಟ್ ಹಾಕುತ್ತಿದ್ದಂತೆ ಎಲ್ಲರೂ ಜೈ ಶ್ರೀ ರಾಮ್, ಜೈ ಶ್ರೀ ಕೃಷ್ಣ ಎಂದು ಕಾಮೆಂಟ್ ಮಾಡ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ರಾಜೇಶ್ ಮೇಘವಾಲ್ ಮಾಡಿರುವ ಕಾಮೆಂಟ್ ವೈರಲ್ ಆಗುತ್ತಿದ್ದಂತೆ ಆತನ ಹಿಡಿದಿರುವ ಗ್ರಾಮಸ್ಥರು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಬಲವಂತವಾಗಿ ಮೂಗು ಉಜ್ಜಿಸಿ, ಅವಮಾನಿಸಿದ್ದಾರೆ. ಇದರ ಜೊತೆಗೆ ಕೊಲೆ ಬೆದರಿಕೆ ಸಹ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಕರಣ ದಾಖಲು: ತನ್ನ ಮೇಲೆ ನಡೆದಿರುವ ದೌರ್ಜನ್ಯದ ವಿರುದ್ಧ ರಾಜೇಶ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ಅಧಿಕಾರಿ ಶುನಿ ಲಾಲ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.