ಸಂಭಾಲ್(ಉತ್ತರಪ್ರದೇಶ): ಮದುವೆಗೆ ಡಿಜೆ ಹಾಕಿಕೊಂಡು ಕುದುರೆ ಸವಾರಿಯಲ್ಲಿ ಬಂದ ದಲಿತ ಸಮುದಾಯದ ಯುವಕನಿಗೆ ಪೊಲೀಸರು ವಿಶೇಷ ಭದ್ರತೆ ನೀಡಿದ್ದಾರೆ. ವಧು ರವಿನಾ (21) ತನ್ನ ಹುಡುಗ ರಾಮ್ ಕಿಶನ್ ಸಂಗೀತದೊಂದಿಗೆ ಕುದುರೆ ಸವಾರಿಯಲ್ಲಿ ಮದುವೆಗೆ ಬರಬೇಕೆಂದು ಬಯಕೆ ವ್ಯಕ್ತಪಡಿಸಿದ್ದರಂತೆ. ಆದರೆ ಮುಖ್ಯ ವಿಚಾರ ಮಾತ್ರ ಇದಲ್ಲ.
ಗುನ್ನೌರ್‌ನ ಲೋಹಮಾಯಿ ಗ್ರಾಮದಲ್ಲಿ ದಲಿತ ಸಮುದಾಯದ ವಿವಾಹ ಮೆರವಣಿಗೆಗೆ ಮೇಲ್ಜಾತಿಯವರು ನಿರ್ಬಂಧ ಹೇರಿದ್ದರು. ವಧುವಿನ ಚಿಕ್ಕಪ್ಪ ರಾಜೇಂದ್ರ ವಾಲ್ಮೀಕಿ ಅವರು ಸಂಭಾಲ್ ಮ್ಯಾಜಿಸ್ಟ್ರೇಟ್ ಮನೀಶ್ ಬನ್ಸಾಲ್ ಅವರಿಗೆ ದೂರು ಸಲ್ಲಿಸಿದ್ದು, ಮೇಲ್ಜಾತಿ ಪುರುಷರು ದಲಿತ ಸಮುದಾಯದ ಮದುವೆಗೆ ಮೆರವಣಿಗೆಯಲ್ಲಿ ಬರಲು ಬಿಡುವುದಿಲ್ಲ. ಹೀಗಾಗಿ ಕಾರ್ಯಕ್ರಮಕ್ಕೆ ಪೊಲೀಸ್ ಭದ್ರತೆ ನೀಡಬೇಕೆಂದು ಕೋರಿದ್ದರು.
ವಧುವಿನ ಕುಟುಂಬದ ಮನವಿಗೆ ಸ್ಪಂದಿಸಿ ಸಂಭಾಲ್ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ ಅವರು ಹತ್ತಿರದ ಪೊಲೀಸ್ ಠಾಣೆಯಿಂದ ಭದ್ರತೆಯ ವ್ಯವಸ್ಥೆ ಮಾಡಿದ್ದರು. ಸರ್ಕಲ್ ಆಫೀಸರ್ ಅಲೋಕ್ ಕುಮಾರ್ ಸಿದ್ದು, ಎಸ್ಎಚ್ಒ ಪುಷ್ಕರ್ ಸಿಂಗ್ ಸೇರಿದಂತೆ 44 ಕಾನ್ಸ್ಟೆಬಲ್ಗಳು, 14 ಸಬ್ಇನ್ಸ್ಪೆಕ್ಟರ್ ಮದುವೆಯ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಳ್ಳುವವರೆಗೂ ಮೆರವಣಿಗೆಯಲ್ಲಿ ಇದ್ದರು. ಅಲ್ಲದೇ ಪೊಲೀಸರು ದಂಪತಿಗೆ 11,000 ರೂಪಾಯಿಯನ್ನು ಉಡುಗೊರೆಯಾಗಿಯೂ ನೀಡಿ ಶುಭಹಾರೈಸಿದ್ದಾರೆ.
ಇದನ್ನೂ ಓದಿ: ನೂತನ ಸರಪಂಚ್ಗೆ 11 ಲಕ್ಷ ರೂಪಾಯಿಯ 500 ನೋಟುಗಳ ಹಾರ ಹಾಕಿ ಸಂಭ್ರಮ