ಕರ್ನಾಲ್ (ಹರಿಯಾಣ): ಭಾರತವು ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ದೇಶ ಎಂದು ಪರಿಗಣಿಸಲಾಗಿದೆ. ಇದಕ್ಕೆ ಪ್ರಮುಖ ಕಾರಣ ಭಾರತ ಕೃಷಿ ಪ್ರಧಾನ ದೇಶ ಎನ್ನುವುದು. ಇಲ್ಲಿ ಕೃಷಿಯ ಜೊತೆಗೆ ರೈತರು ಪಶುಪಾಲನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಾರೆ.
ಡೈರಿ ಉದ್ಯಮ ಅಥವಾ ಹೈನುಗಾರಿಕೆ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ, ಹರಿಯಾಣದ ಡೈರಿ ಉದ್ಯಮವು ಇತ್ತೀಚಿನ ದಿನಗಳಲ್ಲಿ ಮೇವು, ಜಾನುವಾರುಗಳಿಗೆ ನೀಡಬೇಕಾದ ಆಹಾರದ ಬೆಲೆ ಹೆಚ್ಚಳ, ಹಣದುಬ್ಬರ ಸಮಸ್ಯೆಯೊಂದಿಗೆ ಹೋರಾಡುತ್ತಿದೆ. ಈ ಬಾರಿ ಹರಿಯಾಣದಲ್ಲಿ ಮೇವಿನ ಕೊರತೆ ಕಾರಣ ಜಾನುವಾರು ಸಾಕಣೆದಾರರು ನಷ್ಟದ ಹಾದಿ ಹಿಡಿದಿದ್ದಾರೆ. ಮೇವಿನ ಬೆಲೆಯೀಗ ಗಗನಕ್ಕೇರಿದೆ.
ಹರಿಯಾಣದಲ್ಲಿ ಪಶು ಆಹಾರದ ಕೊರತೆ ಕಾಡುತ್ತಿದೆ. ಹಾಗಾಗಿ ಡೈರಿ ಉದ್ಯಮ ಮುಚ್ಚುವ ಹಂತದಲ್ಲಿದೆ. ಹಲವು ಡೈರಿ ನಿರ್ವಾಹಕರು ಕೆಲಸ ಬಿಟ್ಟಿದ್ದು, ಇನ್ನೂ ಹಲವರು ಉದ್ಯಮ ನಿಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಹರಿಯಾಣದ ಕರ್ನಾಲ್ ಮತ್ತು ಕುರುಕ್ಷೇತ್ರ ಜಿಲ್ಲೆಗಳಲ್ಲಿ ಸುಮಾರು 300 ಡೈರಿ ಇದೆ. ಕುರುಕ್ಷೇತ್ರದಲ್ಲಿ ಈ ವರ್ಷ 20 ಹಾಲಿನ ಡೈರಿಗಳು ಮುಚ್ಚಿವೆ. ಕರ್ನಾಲ್‌ನಲ್ಲಿ ಈ ಸಂಖ್ಯೆ 35ಕ್ಕೆ ತಲುಪಿದೆ. ಜಾನುವಾರುಗಳಿಗೆ ಬೇಕಾದ ಮೇವಿನ ಬೆಲೆ ದುಬಾರಿಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ.
ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ: ನೂಪುರ್ ಶರ್ಮಾ ಪರ ಬ್ಯಾಟಿಂಗ್ ಮಾಡಿದ ಕಂಗನಾ ರಣಾವತ್
ಈ ಬಗ್ಗೆ ಡೈರಿ ಉದ್ಯಮಿ, ನಿರ್ವಾಹಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಬಾರಿ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಬಹುತೇಕ ಜಾನುವಾರುಗಳನ್ನು ಮಾರಾಟ ಮಾಡಿದ್ದೇವೆ. ಹಾಲಿಗೆ ಉತ್ತಮ ಬೆಲೆ ಸಿಗದಿರುವುದು ಮತ್ತು ಪಶು ಆಹಾರದ ಬೆಲೆ ದುಬಾರಿಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಮೇವು ದುಬಾರಿಯಾಗಿರುವುದರಿಂದ ಹೈನುಗಾರಿಕೆ ನಿಲ್ಲಿಸಲಾಗುತ್ತಿದೆ. ಲಾಭದ ಮಾತು ದೂರ, ನಾವು ನಷ್ಟದ ಹಾದಿ ಹಿಡಿದಿದ್ದೇವೆ ಎಂದು ತಿಳಿಸಿದ್ದಾರೆ.