ನವದೆಹಲಿ: ಕೆಲವೇ ಗಂಟೆಗಳಲ್ಲಿ ಗುಲಾಬ್ ಚಂಡಮಾರುತದ ತೀವ್ರತೆ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನಿನ್ನೆ(ಭಾನುವಾರ) ತಡರಾತ್ರಿ, ಚಂಡ ಮಾರುತವು ಒಡಿಶಾ, ಆಂಧ್ರಪ್ರದೇಶಗಳಿಗೆ ಪ್ರವೇಶಿಸಿದ್ದು, ಭಾರಿ ಅವಾಂತರ ಸೃಷ್ಟಿಸಿದೆ. ಹಲವು ಮರಗಳು ಧರೆಗುರುಳಿದಿದ್ದು, ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಹಲವೆಡೆ ಹೈ ಅಲರ್ಟ್ ಘೋಷಣೆ
ಹವಾಮಾನ ಇಲಾಖೆಯು ನವರಂಗ್‌ಪುರ, ಕೋರಾಪುಟ್ ಮತ್ತು ಮಲ್ಕಂಗಿರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಅದೇ ರೀತಿ, ನುವಾಪದ, ಬೋಲಾಂಗಿರ್, ರಾಯಗಡ ಮತ್ತು ಕಲಹಂಡಿಯಂತಹ ಕೆಲವು ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಜಿಲ್ಲಾಡಳಿತಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ. ಮಹಾರಾಷ್ಟ್ರದ 36 ಜಿಲ್ಲೆಗಳಿಗೂ ಸೋಮವಾರ ಮತ್ತು ಮಂಗಳವಾರ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ.
ಈ ಚಂಡಮಾರುತ ಕಳಿಂಗಪಟ್ಟಣಂ ಮತ್ತು ಗೋಪಾಲಪುರ ನಡುವೆ ಉತ್ತರ ಆಂಧ್ರಪ್ರದೇಶ ಹಾಗೂ ದಕ್ಷಿಣ ಒಡಿಶಾವನ್ನು ದಾಟಲಿದ್ದು, ಕಳಿಂಗಪಟ್ಟಣಂನಲ್ಲಿ ಹೆಚ್ಚಿನ ಗಾಳಿ ಬೀಸುತ್ತಿದೆ.
ಎರಡು ಮೂರು ಗಂಟೆಗಳವರೆಗೆ ಭೂ ಕುಸಿತ
ಐಎಂಡಿಯ ಇತ್ತೀಚಿನ ಮಾಹಿತಿ ಪ್ರಕಾರ, ಸಂಜೆ 6 ಗಂಟೆಗೆ ತನ್ನ ಭೂಕುಸಿತವನ್ನು ಆರಂಭಿಸಿದ ಚಂಡಮಾರುತವು ಮುಂದಿನ 2-3 ಗಂಟೆಗಳಲ್ಲಿ ದಕ್ಷಿಣ ಕರಾವಳಿ ಒಡಿಶಾ ಮತ್ತು ಉತ್ತರ ಕರಾವಳಿ ಆಂಧ್ರಪ್ರದೇಶದಲ್ಲಿ ಮುಂದುವರಿಯುತ್ತದೆ ಎಂದು ಹೇಳಿದೆ.
ಮೀನುಗಾರ ನಾಪತ್ತೆ, ಇಬ್ಬರು ಸಾವು
ಮೀನುಗಾರರು ನಾಪತ್ತೆಯಾಗಿರುವ ಘಟನೆ ಶ್ರೀಕಾಕುಳಂನಲ್ಲಿ ವರದಿಯಾಗಿದ್ದು, ಗಾಳಿಯ ಅಬ್ಬರಕ್ಕೆ ದೋಣಿ ಅಸ್ತವ್ಯಸ್ತಗೊಂಡು ಆರು ಮೀನುಗಾರರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಓರ್ವ ಮೀನುಗಾರ ನಾಪತ್ತೆಯಾಗಿದ್ದು ಇನ್ನಿಬ್ಬರು ಈಜಿ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಂಜೆ ವೇಳೆಗೆ ತೀವ್ರತೆ ಕಡಿಮೆಯಾಗುವ ಸಾಧ್ಯತೆ
ಚಂಡಮಾರುತ ಭೂಸ್ಪರ್ಶದ ಸಂದರ್ಭದಲ್ಲಿ ಕಳಿಂಗಪಟ್ಟಣಂನಲ್ಲಿ ಗಾಳಿಯ ವೇಗ ಗಂಟೆಗೆ 90 ಕಿ.ಮೀ ನಷ್ಟಿತ್ತು. ಒಡಿಶಾದ ಗೋಪಾಲ್ ಪುರದಲ್ಲಿ ಗಂಟೆಗೆ 30 ಕಿ.ಮೀ ವೇಗದಲ್ಲಿತ್ತು. ಇದೀಗ ಗಂಟೆಗೆ 14 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದು, ಸಂಜೆ ವೇಳೆಗೆ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ.
ರೈಲುಗಳ ಸಂಚಾರ ರದ್ದು, ಪರಿಸ್ಥಿತಿ ಎದುರಿಸಲು NDRF ಸನ್ನದ್ಧ
ಮುನ್ನೆಚ್ಚರಿಕಾ ಕ್ರಮವಾಗಿ ಪೂರ್ವ ಕರಾವಳಿ ರೈಲ್ವೆಯು 34 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಚಂಡಮಾರುತ ತುರ್ತು ಪರಿಸ್ಥಿತಿಯನ್ನು ಎನ್ಡಿಆರ್ಎಫ್ ಸಿಬ್ಬಂದಿ ನಿಯೋಜಿಸಲಾಗಿದೆ.
ರಾಜ್ಯದಲ್ಲಿಯೂ ಮುಂದುವರಿದ ವರುಣಾರ್ಭಟ
ರಾಜ್ಯದಲ್ಲಿ ನಿನ್ನೆಯಿಂದ ಭಾರಿ ಮಳೆಯಾಗುತ್ತಿದ್ದು, ಸೆಪ್ಟೆಂಬರ್ 28 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳು, ಮಲೆನಾಡು, ಉತ್ತರ ಒಳನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.