ನವದೆಹಲಿ: ಸೈಬರ್, ಮಾಹಿತಿ ಮತ್ತು ಆಕಾಶ ಹೊಸ ಯುದ್ಧಭೂಮಿಗಳಾಗುತ್ತಿದ್ದು, ಬಲಪ್ರಯೋಗವು ಹೊಸ ರಣತಂತ್ರವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಬದಲಾಗುತ್ತಿರುವ ಅಂತಾರಾಷ್ಟ್ರೀಯ ಆದ್ಯತೆಗಳ ಮಧ್ಯೆ ಭಾರತೀಯ ವಾಯುಪಡೆಯು ತನ್ನ ವ್ಯೂಹಾತ್ಮಕ ಆದ್ಯತೆಗಳನ್ನು ಹಾಗೂ ಪ್ರತಿಕ್ರಿಯೆಗಳನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಏರ್ ಚೀಫ್ ಮಾರ್ಷಲ್ ವಿವೇಕರಾಮ್ ಚೌಧರಿ ಹೇಳಿದ್ದಾರೆ.
ರಾಜತಾಂತ್ರಿಕತೆ, ಆರ್ಥಿಕತೆ ಮತ್ತು ಮಾಹಿತಿಗಳು ಮಿಲಿಟರಿ ಸಂರಕ್ಷಣೆಗಾಗಿ ಉಪಯೋಗಿಸುವ ಪ್ರಾಥಮಿಕ ಸಾಧನಗಳಾಗುತ್ತಿವೆ. ನಿರಂತರವಾಗಿ ಬದಲಾಗುತ್ತಿರುವ ಸಂಕೀರ್ಣ ಬಹುಮುಖದ ಅಂತಾರಾಷ್ಟ್ರೀಯ ವ್ಯವಸ್ಥೆಯಿಂದ ಸಾಂಪ್ರದಾಯಿಕ ಮಿಲಿಟರಿ ನೀತಿಗಳಿಗೆ ಯಾವುದೇ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ದೆಹಲಿಯಲ್ಲಿ ನಡೆದ ಕ್ಯಾಪ್ ಸ್ಟೋನ್ ಫಸ್ಟ್ ವಾರ್ಫೇರ್ ಅಂಡ್ ಏರೋಸ್ಪೇಸ್ ಸ್ಟ್ರಾಟೆಜಿ ಪ್ರೊಗ್ರಾಂ ಸೆಮಿನಾರ್ನಲ್ಲಿ ಅವರು ತಿಳಿಸಿದರು.
ಅಧಿಕಾರಿಗಳಿಗೆ ವ್ಯೂಹಾತ್ಮಕ ವಿಚಾರಗಳು ಮತ್ತು ಇದರ ಬಗ್ಗೆ ತಿಳಿವಳಿಕೆ ಮೂಡಿಸಲು ಫಸ್ಟ್ ವಾರ್ಫೇರ್ ಅಂಡ್ ಏರೋಸ್ಪೇಸ್ ಸ್ಟ್ರಾಟೆಜಿ ಪ್ರೊಗ್ರಾಂ ಆರಂಭಿಸಲಾಗಿದೆ. ಓದುವಿಕೆ, ಪರಿಶೀಲಿಸುವಿಕೆ, ಸರಿಯಾದ ರೂಪದಲ್ಲಿ ಬರಹಗಳನ್ನು ರಚಿಸುವಿಕೆಗಳನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.