ಅಲಿಗಢ, ಉತ್ತರಪ್ರದೇಶ: ಸಂಬಂಧದಲ್ಲಿ ಮೊದಲಿನಂತೆ ಮಾಧುರ್ಯವಿಲ್ಲದಿದ್ದರೆ ಸಾಮಾನ್ಯವಾಗಿ ಪತ್ನಿಯಿಂದ ಪತಿ ಬೇರೆಯಾಗಲು ನಿರ್ಧರಿಸುತ್ತಾರೆ. ಹಾಗೂ ಕಾನೂನು ಅವಕಾಶದ ಮೂಲಕ ವಿಚ್ಛೇದನ, ಇತ್ಯಾದಿಗಳಿಗೆ ಅರ್ಜಿ ಕೂಡಾ ಸಲ್ಲಿಸುತ್ತಾರೆ. ಆದರೆ ಇಲ್ಲೊಬ್ಬ ಹೆಂಡತಿಯಿಂದ ದೂರವಾಗಲು ಭಯೋತ್ಪಾದಕಿ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲ ಎಸ್‌ಎಸ್‌ಪಿ ಭೇಟಿ ಮಾಡಿ ಎಟಿಎಸ್‌ನಿಂದ ತನಿಖೆಗೆ ಒತ್ತಾಯಿಸಿರುವುದು ಬೆಳಕಿಗೆ ಬಂದಿದೆ.
ಫೇಸ್‌ಬುಕ್ ಮೂಲಕ ಸ್ನೇಹ, ಪ್ರೀತಿ, ಮದುವೆ: ಬುಲಂದ್‌ಶಹರ್ ನಿವಾಸಿ ಸಿರಾಜ್ ಅಲಿ ಪ್ರಸ್ತುತ ಕ್ವಾರ್ಸಿಯಲ್ಲಿ ವಾಸಿಸುತ್ತಿದ್ದಾರೆ. ಗುರುವಾರ ಎಸ್‌ಎಸ್‌ಪಿ ಬಳಿ ದೂರು ನೀಡಲು ತೆರಳಿದ್ದರು. ಸಿರಾಜ್ ಫೇಸ್‌ಬುಕ್ ಮೂಲಕ ಹಸೀನಾ ವಾಡಿಯಾ ಜೊತೆ ಸ್ನೇಹ ಬೆಳೆಸಿದ್ದರು. ಹಸೀನಾ ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ. ಅವರಿಗೆ 12 ವರ್ಷದ ಮಗಳಿದ್ದು, ಆಕೆ ಡೆಹ್ರಾಡೂನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಬ್ಬರ ಆತ್ಮೀಯತೆ ಹೆಚ್ಚಾದಾಗ, ಅವರು 14 ಮೇ 2021 ರಂದು ವಿವಾಹವಾಗಿದ್ದರು.
ಇದರ ನಂತರ ಅವರಿಬ್ಬರು ಕ್ವಾರ್ಸಿ ಪ್ರದೇಶದ ನಾಗ್ಲಾ ಪಟ್ವಾರಿಯಲ್ಲಿ ವಾಸಿಸಲು ಆರಂಭಿಸಿದ್ದಾರೆ. ಅದೇನಾಯ್ತೋ ಏನೋ ಸ್ವಲ್ಪ ಸಮಯದ ನಂತರ ಹಸೀನಾ ಜೊತೆ ಸಿರಾಜ್ ಜಗಳವಾಡಿದ್ದಾನೆ. ಹಸೀನಾ ಬಳಿ ಪುಣೆ ಮತ್ತು ದೆಹಲಿಯ ವಿಳಾಸ ಇರುವ ಎರಡು ಆಧಾರ್ ಕಾರ್ಡ್‌ಗಳಿವೆ. ಆಕೆಯ ಹೆಸರು ಮನೀಶಾ ಮತ್ತು ಪೂಜಾ. ಹಸೀನಾಗೆ ಐಸಿಸ್ ಜೊತೆ ಸಂಬಂಧವಿದೆ ಎಂದೂ ಸಿರಾಜ್ ಆರೋಪಿಸಿದ್ದಾರೆ.
ಹಸೀನಾ ಅವರ ನೆಟ್ವರ್ಕ್ ಕೋಲ್ಕತ್ತಾ, ಪುಣೆ, ದೆಹಲಿ, ನೋಯ್ಡಾ ಮತ್ತು ಡೆಹ್ರಾಡೂನ್‌ವರೆಗೂ ಸಂಪರ್ಕ ಹೊಂದಿವೆ. ನನ್ನ ಪತ್ನಿ ನಾಲ್ಕು ಮೊಬೈಲ್ ಹೊಂದಿದ್ದಾಳೆ. ಆಕೆ ಯಾವುದೋ ಮಿಷನ್ನಲ್ಲಿದ್ದಾಳೆ. ಇದರಿಂದ ದೇಶಕ್ಕೆ ಹಾನಿಯಾಗಬಹುದು ಎಂದು ಆರೋಪಿಸಿ ಸಿರಾಜ್ ಪೊಲೀಸ್ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಪತ್ನಿಯಿಂದಲೂ ದೂರು: ಆರೋಪದ ಗಂಭೀರತೆಯಿಂದಾಗಿ ಎಸ್‌ಎಸ್‌ಪಿ ಕಲಾನಿಧಿ ನೈತಾನಿ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಹಸೀನಾ ಮೊದಲ ಪತಿಯಿಂದ ವಿಚ್ಛೇದನ ಪಡೆದಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಸಿವಿಲ್ ಲೈನ್ ಜುರಿಸ್ಡಿಕ್ಷನಲ್ ಅಧಿಕಾರಿ ಅಶೋಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಹಸೀನಾ ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದಕ್ಕೆ ಪ್ರತಿಯಾಗಿ 21 ಲಕ್ಷ ರೂಪಾಯಿ ದೊರೆತಿದೆ. ಸಿರಾಜ್ ಈ ಹಣವನ್ನು ಖರ್ಚು ಮಾಡುತ್ತಲೇ ಇದ್ದ. ಹಸೀನಾಳ ಬಳಿ ಈಗ ಈ ಹಣ ಮುಗಿದಿದೆ. ಅದಕ್ಕಾಗಿ ಹಸೀನಾ ಜೊತೆಗಿನ ಸಂಬಂಧವನ್ನು ಸಿರಾಜ್ ಕೊನೆಗಾಣಿಸಲು ಬಯಸಿದ್ದಾನೆ. ಈ ಕಾರಣಕ್ಕೆ ಸುಳ್ಳು ದೂರು ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮೊದಲು ಇಬ್ಬರೂ ದೆಹಲಿಯಲ್ಲಿ ವಾಸವಿದ್ದರು. ಹಸೀನಾ ಕೂಡ ತನ್ನ ಗಂಡನ ವಿರುದ್ಧ ಮೊದಲು ದೆಹಲಿಯಲ್ಲಿ, ನಂತರ ಅಲಿಗಢದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿವಿಲ್ ಲೈನ್ ತಿಳಿಸಿದೆ. ವಾಸ್ತವಾಂಶದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ದಕ್ಷಿಣಕನ್ನಡ: ಪೊಲೀಸ್ ಸಿಬ್ಬಂದಿ ಮೇಲೆ ನೈತಿಕ ಪೊಲೀಸ್ ಗಿರಿ ಆರೋಪ, ಇಬ್ಬರ ಬಂಧನ