ಹಾಪುರ್( ಉತ್ತರ ಪ್ರದೇಶ): ಜಿಲ್ಲೆಯ ಬಹದ್ದೂರ್‌ಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೈಕ್ ಡಿಕ್ಕಿಯ ವಿಚಾರವಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್ ಡಿಕ್ಕಿಯಾದ ಬಳಿಕ ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ನಡೆದಿದೆ. ಉದ್ವಿಗ್ನತೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಘಟನೆಯ ಹಿನ್ನೆಲೆ: ಮಂಗಳವಾರ ತಡರಾತ್ರಿ ಬಹದ್ದೂರ್‌ಗಢ ಪೊಲೀಸ್ ಠಾಣಾ ವ್ಯಾಪ್ತಿಯ ಲುಹಾರಿ ಗ್ರಾಮದಲ್ಲಿ ಇರ್ಷಾದ್ ಎಂಬ ಯುವಕನನ್ನು ಅವರದೇ ಗ್ರಾಮದ ಕೆಲವರು ಹೊಡೆದು ಕೊಂದಿದ್ದಾರೆ. ಬೈಕ್ ಡಿಕ್ಕಿ ವಿಚಾರವಾಗಿ ಗ್ರಾಮದಲ್ಲಿ ವಾಸವಾಗಿರುವ ಯುವಕರ ಜತೆ ಇರ್ಷಾದ್ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ. ಆ ಬಳಿಕ ಆರೋಪಿಗಳು ಇರ್ಷಾದ್‌ಗೆ ಥಳಿಸಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿದ್ದ ಇರ್ಷಾದ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇರ್ಷಾದ್ ಮೃತಪಟ್ಟಿದ್ದಾನೆ. ಇಷ್ಟೇ ಅಲ್ಲ, ವಿವಾದದ ವೇಳೆ ಎರಡೂ ಕಡೆಯವರ ನಡುವೆ ಕಲ್ಲು ತೂರಾಟ ಕೂಡಾ ನಡೆದಿದೆ. ಯುವಕನ ಹತ್ಯೆಯ ನಂತರ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ, ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಾರಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪೊಲೀಸರಿಂದ ಬಿಗಿ ಬಂದೋಬಸ್ತ್: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಎಎಸ್ಪಿ ರಾಮ್‌ಕುಮಾರ್ ಅಗರ್ವಾಲ್, ಎರಡೂ ಕಡೆಯ ಉದ್ರಿಕ್ತರನ್ನು ಸಮಾಧಾನ ಪಡಿಸಿ ಶಾಂತಿ ಕಾಪಾಡುವಲ್ಲಿ ಶ್ರಮಿಸಿದ್ದಾರೆ. ಸದ್ಯ, ಲುಹಾರಿ ಗ್ರಾಮದಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಯುವಕನ ಹತ್ಯೆ ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅಭಿಷೇಕ್ ವರ್ಮಾ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಎಎಸ್ಪಿ ಅಗರ್ವಾಲ್ ಸ್ಪಷ್ಟನೆ ಹೀಗಿದೆ; ಕೊಲೆ ಕಾರಣರಾದವನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ನಡುವೆ ಮೃತರ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಈ ಘಟನೆಯಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ಥಳದಲ್ಲಿ ಶಾಂತಿ ಕಾಪಾಡಲಾಗಿದೆ ಎಂದು ಎಎಎಸ್ಪಿ ರಾಮಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ತನಿಖೆ ಮುಂದುವರೆದಿದ್ದು, ಇನ್ನಷ್ಟೇ ಘಟನೆ ಹಿಂದಿನ ಅಸಲಿ ಕಾರಣ ಗೊತ್ತಾಗಲಿದೆ.
ಇದನ್ನು ಓದಿ:ಜಮೀನು ವಿವಾದದ ಕಿತ್ತಾಟದಲ್ಲಿ 6 ಬಾರಿ ಟ್ರ್ಯಾಕ್ಟರ್ ಹತ್ತಿಸಿ ಯುವಕನ ಬರ್ಬರ ಹತ್ಯೆ!