ಲಖನೌ, ಉತ್ತರಪ್ರದೇಶ: ನಗರದಲ್ಲಿ ಹನಿಟ್ರ್ಯಾಪ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮದುವೆಯಾಗಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುವ ಮಹಿಳೆಯೊಬ್ಬಳು ಎಂಜಿನಿಯರ್ ಒಬ್ಬರ ಜೊತೆ ಪ್ರೀತಿಯ ನಾಟಕವಾಡಿದ್ದಾಳೆ. ಬಳಿಕ ಏಕಾಂತದಲ್ಲಿದ್ದ ಫೋಟೋಗಳನ್ನು ತೆಗೆದು ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ. ಹಣ ನೀಡದ ಹಿನ್ನೆಲೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹರಿಬಿಟ್ಟಿರುವ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ.
ಯುವಕನ ಅಶ್ಲೀಲ ಚಿತ್ರ ತೆಗೆದ ಮಹಿಳೆ: ಸರೋಜಿನಿ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಪ್ರಯಾಗ್‌ರಾಜ್ ನಿವಾಸಿ ಕೆಲ ದಿನಗಳ ಮಟ್ಟಿಗೆ ಸರೋಜಿನಿನಗರ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ಸಮಯದಲ್ಲಿ ಆತ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಆತನಿಗೆ ಅದೇ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಮಹಿಳೆಯೊಂದಿಗೆ ಸ್ನೇಹ ಬೆಳೆದಿದೆ. ವಾಟ್ಸ್ಆ್ಯಪ್ ಚಾಟ್ ಜೊತೆಗೆ ಇಬ್ಬರೂ ವಿಡಿಯೋ ಕಾಲ್ನಲ್ಲಿ ಮಾತನಾಡತೊಡಗಿದ್ದಾರೆ. ಇದಾದ ನಂತರ ಮಹಿಳೆಯೂ ಹುಡುಗನ ಕೋಣೆಗೆ ಬರಲು ಆರಂಭಿಸಿದ್ದಾಳೆ. ಈ ವೇಳೆ ಮಹಿಳೆ ಇಂಜಿನಿಯರ್‌ನ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ನಕಲಿ ಖಾತೆಯ ಮೂಲಕ ಫೋಟೋಗಳು ವೈರಲ್: ’’ಆರೋಪಿ ಮಹಿಳೆ ತನ್ನಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದಳು. 10 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಳು. ಬಳಿಕ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ಫೋಟೋಗಳನ್ನು ವೈರಲ್ ಆಗುತ್ತವೆ ಎಂದು ಬೆದರಿಕೆ ಕೂಡಾ ಹಾಕಿದ್ದಳು, ನಾನು ಹಣ ನೀಡಲು ನಿರಾಕರಿಸಿದಾಗ ಮಹಿಳೆ ಫೇಸ್‌ಬುಕ್‌ನಲ್ಲಿ ಸುಮಾರು 38 ನಕಲಿ ಖಾತೆಗಳನ್ನು ಸೃಷ್ಟಿಸಿ ನನ್ನ ಚಿತ್ರಗಳನ್ನು ವೈರಲ್ ಮಾಡಿದ್ದಾಳೆ‘‘ ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಹಲವು ಯುವಕರಿಂದ ಹಣ ವಸೂಲಿ : ಈ ಬಗ್ಗೆ ಸಂತ್ರಸ್ತ ಎಂಜಿನಿಯರ್ ಸೈಬರ್ ಕ್ರೈಂ ಎಡಿಜಿ, ಸೈಬರ್ ಕ್ರೈಂ ಎಸ್ಪಿಗೂ ದೂರು ನೀಡಿದ್ದಾರೆ. ಅದರ ತನಿಖೆಯಲ್ಲಿ ಆರೋಪಿ ಮಹಿಳೆ ಈಗಾಗಲೇ ಅನೇಕ ಯುವಕರ ಅಶ್ಲೀಲ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಅವರಿಂದ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಅವಳ ವಿಚ್ಛೇದನ ಪ್ರಕರಣವು ನ್ಯಾಯಾಲಯದಲ್ಲಿ ನಡೆಯುತ್ತಿದೆ. ದೂರು ನೀಡಿದರೂ ಮಹಿಳೆಯನ್ನು ಬಂಧಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸಂತ್ರಸ್ತ ಇಂಜಿನಿಯರ್ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಲಯ ಡಿಸಿಪಿ ಅಪರ್ಣಾ ರಜತ್ ಕೌಶಿಕ್ ತಿಳಿಸಿದ್ದಾರೆ.
ಓದಿ: ರಹಸ್ಯ ಮಾಹಿತಿ ಹಂಚಿಕೆ ಆರೋಪ: ವಿದೇಶಾಂಗ ಸಚಿವಾಲಯದ ನೌಕರ ಅರೆಸ್ಟ್
ಮಂಗಳೂರಿನಲ್ಲಿ ಕೇರಳ ಉದ್ಯಮಿಯ ಹನಿಟ್ರ್ಯಾಪ್ ಪ್ರಕರಣ: ಕೇರಳ ಮೂಲದ ಉದ್ಯಮಿಯೊಬ್ಬರು ಮಂಗಳೂರಿನಲ್ಲಿ ಹನಿಟ್ರ್ಯಾಪ್ಗೆ ಸಿಲುಕಿ 10 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಯುವತಿ ಸೇರಿ ಎಂಟು ಮಂದಿಯನ್ನು ಬಂಧಿಸಿದ್ದರು.
ಫೆಬ್ರವರಿ 16ರಂದು ವಾಮಂಜೂರು ಬಳಿಯ ಮೂಡುಶೆಡ್ಡೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ಉದ್ಯಮಿ ಹನಿಟ್ರ್ಯಾಪ್‌ಗೊಳಗಾಗಿದ್ದರು. ಕೇರಳ ಮೂಲದ ಇಬ್ಬರು ಉದ್ಯಮಿಗಳು ತಮ್ಮ ಸಂಪರ್ಕಕ್ಕೆ ಬಂದಿದ್ದ ಮೂಡುಬಿದಿರೆ ಮೂಲದ ಯುವತಿಯೊಂದಿಗೆ ರೆಸಾರ್ಟ್ಗೆ ತೆರಳಿದ್ದರು. ರಾತ್ರಿ ವೇಳೆ ಅವರು ರೆಸಾರ್ಟ್ನಲ್ಲಿದ್ದಾಗಲೇ ತಂಡವೊಂದು ಕೊಠಡಿಗೆ ಏಕಾಏಕಿ ನುಗ್ಗಿತ್ತು. ತಂಡದಲ್ಲಿದ್ದ ಯುವಕರು ಅಲ್ಲಿನ ದೃಶ್ಯಗಳನ್ನು ವಿಡಿಯೋ ಮಾಡಿದ್ದರು. ಉದ್ಯಮಿಗೆ ಹಲ್ಲೆಗೈದು ಹಣಕ್ಕಾಗಿ ಪೀಡಿಸಿದ್ದರು. ಅಲ್ಲದೆ, ಇಂತಿಷ್ಟು ಹಣ ಕೊಟ್ಟಲ್ಲಿ ಮಾತ್ರ ಬಿಡ್ತೀವಿ, ಇಲ್ಲಾಂದ್ರೆ ವಿಡಿಯೋವನ್ನು ವೈರಲ್ ಮಾಡುತ್ತೇವೆಂದು ಧಮ್ಕಿ ಹಾಕಿದ್ದರು. ಇದರಿಂದ ಬೆದರಿದ ಉದ್ಯಮಿ ತಮ್ಮಲ್ಲಿದ್ದ ಹಣವನ್ನು ಕೊಟ್ಟು ಅಲ್ಲಿಂದ ಪಾರಾಗಿ ಬಂದಿದ್ದರು.