ಶಹಜಹಾನ್‌ಪುರ: ಉತ್ತರಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ಭೀಕರ ರಸ್ತೆ ಅಪಘಾತ ನಡೆದು ಐವರು ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಮದುವೆ ಸಮಾರಂಭ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಬೈಕ್ ಸವಾರರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆ ಅಪಘಾತದಲ್ಲಿ ಬೈಕಿನಲ್ಲಿದ್ದ 5 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಜೊತೆಗೆ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ. ಈ ಘಟನೆಯು ಸೆಹ್ರಾಮೌ ದಕ್ಷಿಣ ಪ್ರದೇಶದ ಶಹಜಹಾನ್‌ಪುರ ಲಕ್ನೋ ಸ್ಟೇಟ್ ಮಾರ್ಗದಲ್ಲಿರುವ ದಿಲಾವರ್‌ಪುರ ಗ್ರಾಮದ ಬಳಿ ನಡೆದಿದೆ ಎಂದು ವರದಿಯಾಗಿದೆ. ಜೈತಿಪುರ ನಿವಾಸಿಯಾಗಿರುವ ರಘುವೀರ್ ಕುಟುಂಬ ಶಹಾಬಾದ್ ಪ್ರದೇಶದಲ್ಲಿ ಸಂಬಂಧಿಕರೊಬ್ಬರ ಮದುವೆ ಸಮಾರಂಭಕ್ಕೆ ಹೋಗಿ ಮರಳುತ್ತಿದ್ದರು ಎಂದು ತಿಳಿದು ಬಂದಿದೆ.
ಬೈಕ್ ಸವಾರ ರಘುವೀರ್ (34), ಪತ್ನಿ ಜ್ಯೋತಿ (30), ಮಕ್ಕಳಾದ ಅಭಿ (3), ಕೃಷ್ಣ (5) ಮತ್ತು ಅವರ ಸಂಬಂಧಿ ಜೂಲಿ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರೆಲ್ಲರೂ ಬೈಕ್‌ನಲ್ಲಿ ಸಮಾರಂಭಕ್ಕೆ ಹೋಗಿ ಶುಕ್ರವಾರ ಬೆಳಗ್ಗೆ ದಿಲಾವರಪುರ ಗ್ರಾಮದ ಬಳಿ ಹಿಂದಿರುಗುತ್ತಿದ್ದಾಗ ಅವರ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಎಲ್ಲರ ತಲೆಗೆ ಗಂಭೀರ ಪೆಟ್ಟಾಗಿದೆ. ಸದ್ಯ ಪೊಲೀಸರು ಎಲ್ಲ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಇಡೀ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಕಾರ, ದಿಲಾವರಪುರ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ್ದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ವೈದ್ಯರು ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಉತ್ತರಾಖಂಡದಲ್ಲಿ ಬೊಲೆರೋ ಕಂದಕಕ್ಕೆ ಬಿದ್ದು 9 ಜನ ಸಾವು: ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ ನಿನ್ನೆ ಈ ಘಟನೆ ನಡೆದಿತ್ತು. "ಬಾಗೇಶ್ವರ ಜಿಲ್ಲೆಯ ಸಾಮಾ ಗ್ರಾಮದ ಒಟ್ಟು 11 ಜನರು ಕಾರಿನಲ್ಲಿ ಮುನ್ಸಿಯಾರಿ ಬ್ಲಾಕ್‌ನ ಹೊಕ್ರಾದಲ್ಲಿರುವ ಕೋಕಿಲಾ ದೇವಿ ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದರು. ಹೊಕ್ರಾ ಸಮೀಪ ಕಾರು ಕಂದಕಕ್ಕೆ ಬಿದ್ದಿತ್ತು. ಪರಿಣಾಮ 11 ಪೈಕಿ 9 ಮಂದಿ ಮೃತಪಟ್ಟಿದ್ದು ಮತ್ತಿಬ್ಬರು ತೀವ್ರವಾಗಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದರು.
ರಸ್ತೆ ಮಧ್ಯೆ ಇಳಿಜಾರಿನ ಕಾರಣ ಚಾಲಕನಿಗೆ ಕಾರು ನಿಭಾಯಿಸಲು ಸಾಧ್ಯವಾಗದೇ ಬೊಲೆರೋ ಕಾರು ಅಂದಾಜು 600 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿತ್ತು. ದುರ್ಗಮ ಕಂದಕಕ್ಕೆ ಕಾರು ಉರುಳುತ್ತಿದ್ದಾಗ ಕಾರಿನಲ್ಲಿದ್ದವರು ಜೀವಭಯದಿಂದ ಕಿರುಚಾಡಿಕೊಂಡಿದ್ದರು. ಇದನ್ನು ಕೇಳಿದ ಸಮೀಪದ ಗ್ರಾಮಗಳ ಜನರು ತಮ್ಮ ಕೆಲಸ ಬಿಟ್ಟು ಘಟನಾ ಸ್ಥಳದೆಡೆಗೆ ಓಡಿ ಬಂದು ರಕ್ಷಿಸುವ ಪ್ರಯತ್ನ ಮಾಡಿದ್ದರು. ಆದರೆ, ಅಷ್ಟರಲ್ಲಾಗಲೇ ಕಾರು ಕಂದಕಕ್ಕೆ ಬಿದ್ದಾಗಿತ್ತು. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳು ಧಾವಿಸಿ ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ, ಕಂದಕವು ದುರ್ಗಮವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ಸಾಕಷ್ಟು ತೊಂದರೆಯಾಗಿತ್ತು. ಕಷ್ಟಪಟ್ಟು ಆ್ಯಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅವರೆಲ್ಲ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ: ಮಂತ್ರಾಲಯದಿಂದ ವಾಪಸಾಗುತ್ತಿದ್ದ ಖಾಸಗಿ ಬಸ್ ಅಪಘಾತ: 25ಕ್ಕೂ ಹೆಚ್ಚು ಮಂದಿಗೆ ಗಾಯ