ರಾಂಚಿ, ಜಾರ್ಖಂಡ್: ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ನಗರದಲ್ಲಿ ಜ್ಯೂಸ್ ವ್ಯಾಪಾರಿ ಮತ್ತು ಆತನ ಉದ್ಯೋಗಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಈ ಘಟನೆ ಬರಿಯಾತು ಪೊಲೀಸ್ ಠಾಣಾ ವ್ಯಾಪ್ತಿಯ ಸೈನ್ಸ್ ಸಿಟಿ ಬಳಿ ನಡೆದಿದೆ. ಮೃತರು ಜ್ಯೂಸ್ ವ್ಯಾಪಾರಿ ಮುಖೇಶ್ ಮತ್ತು ಅವರ ಉದ್ಯೋಗಿ ರೋಹನ್ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಯಲ್ಲಿ ಮುಖೇಶ್‌ಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ರೋಹನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಮನೆಗೆ ತೆರಳುತ್ತಿದ್ದ ವೇಳೆ ಗುಂಡಿನ ದಾಳಿ: ಶುಕ್ರವಾರ ರಾತ್ರಿ 10.30ರ ಸುಮಾರಿ ಈ ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಛತ್ರದ ನಿವಾಸಿ ಮುಖೇಶ್ ಸಾವ್ ಮತ್ತು ಕೆಲಸಗಾರ ರೋಹನ್ ಸಾಹೇಬ್ ತಮ್ಮ ಜ್ಯೂಸ್ ಶಾಪ್ ಬಂದ್ ಮಾಡಿ ಮನೆ ಕಡೆ ತೆರಳುತ್ತಿದ್ದರು. ಇದೇ ವೇಳೆ, ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮುಖೇಶ್ ಹಾಗೂ ರೋಹನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಮುಖೇಶ್ ಮತ್ತು ರೋಹನ್ ತಲೆಗಳಿಗೆ ಗುಂಡು ತಗುಲಿದೆ. ಮುಖೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಗುಂಡಿನ ದಾಳಿ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ರೋಹನ್‌ನನ್ನು ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರೋಹನ್ ಸಾವನ್ನಪ್ಪಿದರು.
ಹಂತಕರು ಪರಿಚಿತರು: ಇನ್ನು ಗುಂಡಿನ ದಾಳಿ ನಡೆಸಿದ್ದ ಹಂತಕರು ಮುಖೇಶ್ಗೆ ಪರಿಚಯಸ್ಥರಾಗಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಶಂಕೆ ವ್ಯಕ್ತವಾಗಿದೆ. ಹತ್ಯೆಗೂ ಮುನ್ನ ಹಂತಕರಿಬ್ಬರು ಮುಖೇಶ್ ಜೊತೆ ಮಾತುಕತೆ ನಡೆಸಿದ್ದರು. ಮಾತುಕತೆ ಬಳಿಕ ಶೂಟೌಟ್ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡು: ಎಸ್‌ಎಸ್‌ಪಿ ಕಿಶೋರ್ ಕೌಶಲ್, ಸಿಟಿ ಎಸ್‌ಪಿ ಶುಭಾಂಶು ಜೈನ್, ಡಿಎಸ್‌ಪಿ ಸದರ್ ಸೇರಿದಂತೆ ಹಲವು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಎಫ್‌ಎಸ್‌ಎಲ್ ತಂಡವನ್ನು ಸ್ಥಳಕ್ಕೆ ಕರೆಸಿ ತಪಾಸಣೆ ಕೂಡಾ ನಡೆಸಲಾಯಿತು. ಘಟನೆ ನಡೆದ ಸ್ಥಳದಿಂದ ಪೊಲೀಸರು ಗೂಡಂಗಡಿ ಪತ್ತೆ ಮಾಡಿದ್ದಾರೆ. ರಾಂಚಿಯ ಹಿರಿಯ ಎಸ್ಪಿ ಕಿಶೋರ್ ಕೌಶಲ್ ಮಾತನಾಡಿ, ಪ್ರಾಥಮಿಕ ತನಿಖೆಯಲ್ಲಿ ಮುಖೇಶ್ ಜ್ಯೂಸ್ ಶಾಪ್ ನಡೆಸುವ ವಿಚಾರದಲ್ಲಿ ಬೇರೆಯವರ ಜೊತೆ ವೈಷಮ್ಯ ಹೊಂದಿದ್ದರು ಎಂದು ತಿಳಿದು ಬಂದಿದೆ. ಈ ವೈಷಮ್ಯಕ್ಕೂ ಈ ಘಟನೆಗೂ ಸಂಬಂಧ ಇದೆಯಾ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿ ಪತ್ತೆಗಾಗಿ ಕ್ರಮ ಕೈಗೊಂಡ ಪೊಲೀಸರು: ಸಿಕ್ಕಿರುವ ಮಾಹಿತಿ ಪ್ರಕಾರ ಕೊಲೆಯಲ್ಲಿ ಭಾಗಿಯಾಗಿರುವ ಆರೋಪಿಗಳ ಸಂಪೂರ್ಣ ಮಾಹಿತಿ ಪೊಲೀಸರಿಗೆ ದೊರೆತಿದೆ. ಸದ್ಯ ಇಬ್ಬರೂ ಹಂತಕರು ಪರಾರಿಯಾಗಿದ್ದು, ಇವರ ಪತ್ತೆಗಾಗಿ ಪೊಲೀಸ್ ತಂಡ ವಿವಿಧೆಡೆ ದಾಳಿ ನಡೆಸುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ: ಬಿಬಿಎಂಪಿ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಅಗ್ನಿ ಅವಘಡ: ತಾಂತ್ರಿಕ ವಿಚಾರಣೆಗೆ ಆದೇಶ