ನವದೆಹಲಿ: ಕೋವಿಡ್ ಲಸಿಕೆಯನ್ನು ಮೊದಲಿಗೆ ಆರೋಗ್ಯ ಇಲಾಖೆಯ ಒಂದು ಕೋಟಿ ಸಿಬ್ಬಂದಿಗೆ ನೀಡಲಾಗುವುದು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಕೊರೊನಾ ವಾರಿಯರ್ಗಳಾಗಿ ಕಾರ್ಯ ನಿರ್ವಹಿಸುತ್ತಿರುವ 2 ಕೋಟಿ ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ವೈದ್ಯರು ಮತ್ತು ದಾದಿಯರು ಸೇರಿದಂತೆ ಸುಮಾರು ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮೊದಲು ವ್ಯಾಕ್ಸಿನ್ ನೀಡಲಾಗುವುದು. ಬಳಿಕ ಪೊಲೀಸ್ ಮತ್ತು ಸಶಸ್ತ್ರ ಪಡೆಗಳಂತಹ ಸುಮಾರು ಎರಡು ಕೋಟಿ ಮುಂಚೂಣಿ ಕಾರ್ಮಿಕರಿಗೆ ಮತ್ತು ಪುರಸಭೆಯ ಕಾರ್ಮಿಕರಿಗೆ ನೀಡಲಾಗುವುದು ಎಂದರು.
ಸಭೆಯಲ್ಲಿ ವಿವಿಧ ಪಕ್ಷಗಳ 13 ನಾಯಕರು ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೋವಿಡ್ ಉಲ್ಭಣಗೊಂಡ ನಂತರ ಪ್ರಸ್ತುತ ಪರಿಸ್ಥಿತಿ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಕರೆದ ಎರಡನೇ ಸಭೆ ಇದಾಗಿತ್ತು.
ಇದನ್ನೂ ಓದಿ: ಭಾರತದಲ್ಲಿ ಶೀಘ್ರದಲ್ಲೇ ಕೋವಿಡ್ ಲಸಿಕೆ ಲಭ್ಯ: ಪ್ರಧಾನಿ ಮೋದಿ
ಕೋವಿಡ್ ಲಸಿಕೆ ಅಭಿವೃದ್ಧಿ ಪರಿಶೀಲಿಸಲು ಪ್ರಧಾನಿ ಮೋದಿ, ಇತ್ತೀಚೆಗಷ್ಟೇ ಅಹ್ಮದಾಬಾದ್, ಹೈದರಾಬಾದ್, ಪುಣೆಯ ಔಷಧೀಯ ಕಂಪನಿಗೆ ಭೇಟಿ ನೀಡಿದ್ದರು. ಬಳಿಕ ಈ ಸಭೆ ನಡೆದಿದ್ದು ಭಾರಿ ಮಹತ್ವ ಪಡೆದುಕೊಂಡಿದೆ.