ಅಹಮದ್ನಗರ( ಮಹಾರಾಷ್ಟ್ರ): ಸರ್ಕಾರ ನೀಡುತ್ತಿರುವ ಅಂಕಿ - ಅಂಶಕ್ಕೂ ಸ್ಮಶಾನದಲ್ಲಿ ನಡೆಯುತ್ತಿರುವ ಅಂತ್ಯಕ್ರಿಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಯಾಕೆಂದರೆ ಅಹಮ್ಮದ್ ನಗರದಲ್ಲಿ ಏಪ್ರಿಲ್ 8 ಹಾಗೂ 9 ರಂದು ಬರೋಬ್ಬರಿ 91 ಶವಗಳನ್ನ ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಗಿದೆ.
ಆದರೆ ಸರ್ಕಾರದ ಅಂಕಿ - ಅಂಶಗಳು ಬೇರೆಯದ್ದೇ ಕಥೆ ಹೇಳುತ್ತಿವೆ. ಸರ್ಕಾರದ ವರದಿ ಪ್ರಕಾರ ಕೇವಲ 3 ಸಾವುಗಳು ಸಂಭವಿಸಿದೆಯಂತೆ. ಆದರೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ಅಂಕಿ-ಅಂಶಗಳು ಈ ವ್ಯತ್ಯಾಸವನ್ನ ಸ್ಪಷ್ಟವಾಗಿ ತೋರಿಸುತ್ತಿವೆ.
ಇದನ್ನೂ ಓದಿ: ಮಹಾರಾಷ್ಟ್ರ, ದೆಹಲಿಯಲ್ಲಿ ಮೀತಿ ಮೀರಿದ ಕೊರೊನಾ..ಒಂದೇ ದಿನ ದಾಖಲೆಯ ಕೋವಿಡ್ ಕೇಸ್ ಪತ್ತೆ!
ಇಲ್ಲಿನ ಅಮರಧಾಮ ಸ್ಮಶಾನದಲ್ಲಿ 20 ಶವಗಳನ್ನ ವಿದ್ಯುತ್ ಚಿತಾಗಾರದಲ್ಲಿ ಹಾಗೂ 29 ಶವಗಳನ್ನ ಹೂಳಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಅಹಮ್ಮದ್ನಗರ ಮಹಾರಾಷ್ಟ್ರ ನವನಿರ್ಮಾಣ ಸೇನಾ ಹೇಳುವ ಪ್ರಕಾರ ದಿನವೊಂದಕ್ಕೆ ಸುಮಾರು 40- 50 ಶವಗಳ ಅಂತ್ಯಕ್ರಿಯೆ ಆಗುತ್ತಿದೆಯಂತೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನವ ನಿರ್ಮಾಣ ಸೇನೆ ಸರ್ಕಾರ ನಿಜಾಂಶ ಮುಚ್ಚಿಡುವುದೇಕೆ? ಎಂದು ಪ್ರಶ್ನೆ ಮಾಡಿದೆ.
ಇನ್ನು ಮಹಾರಾಷ್ಟ್ರದಲ್ಲಿ ಪ್ರತಿದಿನ 50 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು, ನೂರಾರು ಜನರು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ ದಾಖಲೆಯ 63 ಸಾವಿರ ಹೊಸ ಪ್ರಕರಣ ದೃಢಗೊಂಡಿದ್ದು, 300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.