ನವದೆಹಲಿ: 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕಾ ಅಭಿಯಾನವು ಇಂದಿನಿಂದ ದೇಶಾದ್ಯಂತ ಪ್ರಾರಂಭವಾಗಲಿದೆ. ದೇಶದಲ್ಲಿ ಕೋವಿಡ್ ಮೂರನೇ ಅಲೆಯ ಆತಂಕ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಡಿಸೆಂಬರ್ 25, 2021 ರಂದು, ಮಕ್ಕಳಿಗೆ ಕೊರೊನಾ ಲಸಿಕೆ ಹಾಗೂ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡುವ ಮಹತ್ವದ ಘೋಷಣೆ ಮಾಡಿದ್ದರು. ಹೀಗಾಗಿ, ಜನವರಿ 3 ರಿಂದ ದೇಶಾದ್ಯಂತ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ.
ಓದಿ: Omicron scare: ನಾಳೆಯಿಂದ ಶಾಲಾ-ಕಾಲೇಜು, ಥಿಯೇಟರ್, ಸಲೂನ್ ಬಂದ್!
ಈ ಕುರಿತು ಮಾಹಿತಿ ನಿಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಪ್ರಸ್ತುತ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ. Co-WIN ಪೋರ್ಟಲ್‌ನಲ್ಲಿ ಶನಿವಾರದಿಂದವೇ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಹೊರಡಿಸಿದ ಮಾರ್ಗಸೂಚಿಗಳ ಅನ್ವಯ ಲಸಿಕೆ ನೀಡಲಾಗುವುದು. ಕೋವಾಕ್ಸಿನ್ನ ಹೆಚ್ಚುವರಿ ಡೋಸ್ಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.
ಓದಿ: ಮತ್ತೆ ಸಾವಿರ ಗಡಿ ದಾಟಿದ ಕೊರೊನಾ.. ರಾಜ್ಯದಲ್ಲಿಂದು 1187 ಮಂದಿಗೆ ಸೋಂಕು, 6 ಮಂದಿ ಬಲಿ
15-18 ವರ್ಷ ವಯಸ್ಸಿನವರು ಕೋ-ವಿನ್ ವೆಬ್ಸೈಟ್ನಲ್ಲಿ ಅಸ್ತಿತ್ವದಲ್ಲಿರುವ ಖಾತೆಯ ಮೂಲಕ ಅಥವಾ ಬೇರೆ ಮೊಬೈಲ್ ಸಂಖ್ಯೆಯ ಮೂಲಕ ಹೊಸ ಖಾತೆಯನ್ನು ರಚಿಸಿ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ಪೋರ್ಟಲ್‌ನಲ್ಲಿ ಲಸಿಕೆಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. 2007 ರಲ್ಲಿ ಹಾಗೂ ಅದಕ್ಕಿಂತ ಮುನ್ನ ಜನಿಸಿದ ಎಲ್ಲಾ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆ.
ಜನವರಿ 1 ರಿಂದಲೇ ನೋಂದಣಿ ಪ್ರಕಿಯೆ ಪ್ರಾರಂಭವಾಗಿದ್ದು, ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ಅನ್ನು ಜನವರಿ 10 ರಿಂದ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆ ಈಗಾಗಲೇ ಘೋಷಿಸಿದೆ.
ರಾಜ್ಯದಲ್ಲೂ ಇಂದಿನಿಂದ 15-18 ವರ್ಷದ ಮಕ್ಕಳಿಗೆ ಲಸಿಕೆ
ರಾಜ್ಯದಲ್ಲೂ ಇಂದಿನಿಂದ ಮಕ್ಕಳಿಗೆ ಲಸಿಕೆ ನೀಡಿಕೆ ಆರಂಭವಾಗಲಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ.