ನವದೆಹಲಿ: ಆಮ್ಲಜನಕದ ಹಾಹಾಕಾರ ಉಂಟಾಗಿರುವ ಭಾರತದಲ್ಲಿ ರಕ್ಕಸ ಕೊರೊನಾದಿಂದ ನಿನ್ನೆ ಮತ್ತೆ 4,120 ಜನರ ಪ್ರಾಣಪಕ್ಷಿ ಹಾರಿಹೋಗಿದೆ. ಅನೇಕ ರಾಜ್ಯಗಳು ಲಾಕ್ಡೌನ್, ಕಠಿಣ ಕರ್ಫ್ಯೂ ಹೇರಿದ್ದರೂ 24 ಗಂಟೆಗಳ ಅವಧಿಯಲ್ಲಿ 3,62,727 ಸೋಂಕಿತರು ಪತ್ತೆಯಾಗಿದ್ದಾರೆ.
ದೇಶದಲ್ಲೀಗ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,37,03,665, ಮೃತರ ಸಂಖ್ಯೆ 2,58,317 ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 37,10,525ಕ್ಕೆ ಏರಿಕೆಯಾಗಿದೆ. ಬುಧವಾರ 3,52,181 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ ಒಟ್ಟು 1,97,34,823 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಕೊರೊನಾದಿಂದ ಚೇತರಿಸಿಕೊಂಡ ಕೆಲವು ರೋಗಿಗಳಲ್ಲಿ ಕಪ್ಪು ಶಿಲೀಂಧ್ರ.. ಕಾರಣ ಹಾಗೂ ಲಕ್ಷಣಗಳೇನು?
ವ್ಯಾಕ್ಸಿನ್ ಅಭಾವ
ಮೇ 1ರಿಂದ 18ರಿಂದ 44 ವರ್ಷದವರಿಗೆ ವ್ಯಾಕ್ಸಿನೇಷನ್ ಆರಂಭಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದ್ದರೂ ಲಸಿಕೆಯ ಕೊರತೆಯಿಂದಾಗಿ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ 18-44 ವರ್ಷ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ಸ್ಥಗಿತಗೊಳಿಸಲಾಗಿದೆ. ಜನವರಿ 16ರಿಂದ ಈವರೆಗೆ ಒಟ್ಟು 17,72,14,256 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.