ನವದೆಹಲಿ: ತುರ್ತು ಆರೋಗ್ಯ ಪರಿಸ್ಥಿತಿ ಎದುರಿಸುತ್ತಿರುವ ಭಾರತದಲ್ಲಿ 24 ಗಂಟೆಗಳಲ್ಲಿ ಮತ್ತೆ ಹೊಸದಾಗಿ 3,29,942 ಕೋವಿಡ್ ಪ್ರಕರಣಗಳು ವರದಿಯಾಗಿವೆ. 3,876 ಮಂದಿ ಮಾರಕ ಸೋಂಕಿನಿಂದ ಉಸಿರು ನಿಲ್ಲಿಸಿದ್ದಾರೆ. ಆದರೆ ಕಳೆದೊಂದು ವಾರಕ್ಕೆ ಹೋಲಿಸಿದರೆ ಹೊಸ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ.
ದೇಶದ ಒಟ್ಟು ಸೋಂಕಿತರ ಸಂಖ್ಯೆ 2,29,92,517 ಹಾಗೂ ಮೃತರ ಸಂಖ್ಯೆ 2,49,992ಕ್ಕೆ ಹೆಚ್ಚಳವಾಗಿದೆ. ಸೋಮವಾರ ಒಂದೇ ದಿನ 3,56,082 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 1,90,27,304 ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಭಾರತದಲ್ಲೀಗ 37,15,221 ಕೊರೊನಾ ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಖುಷಿಯ ಸುದ್ದಿ ಏನಂದ್ರೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟವರಿಗಿಂತ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ ಹೆಚ್ಚಳವಾಗಿದೆ. ಇದು ಕೊರೊನಾ ಸಂಕಷ್ಟದ ಸಮಯದಲ್ಲಿ ಸ್ವಲ್ಪ ನೆಮ್ಮದಿ ತಂದಿದೆ.
ಇದನ್ನೂ ಓದಿ: ಭಾರತದಲ್ಲಿ ಹೊಸ ಬಗೆ ಕೋವಿಡ್ ಅಟ್ಟಹಾಸ: ಅಮೆರಿಕದಲ್ಲಿ 12-15 ವಯಸ್ಸಿನ ಮಕ್ಕಳಿಗೂ ಲಸಿಕೆ
ನಿಧಾನಗತಿಯಲ್ಲಿ ವ್ಯಾಕ್ಸಿನೇಷನ್
12-15 ವಯಸ್ಸಿನ ಮಕ್ಕಳಿಗೂ ಲಸಿಕೆ ನೀಡಲು ಅಮೆರಿಕ ಸಜ್ಜಾಗಿದ್ದರೆ, ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೂಡ ಸರಿಯಾಗಿ ವ್ಯಾಕ್ಸಿನ್ ಸಿಗುತ್ತಿಲ್ಲ. ಜನವರಿ 16 ರಿಂದ ದೇಶಾದ್ಯಂತ ಲಸಿಕಾಭಿಯಾನ ಪ್ರಾರಂಭಿಸಲಾಗಿತ್ತು. ಆರಂಭದಲ್ಲಿ 10 ಕೋಟಿ ಮಂದಿಗೆ ಲಸಿಕೆ ನೀಡಲು ಕೆಲವೇ ದಿನಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಈಗ ಲಸಿಕೆಯ ಅಭಾವದಿಂದಾಗಿ ವ್ಯಾಕ್ಸಿನೇಷನ್ ಡ್ರೈವ್ ನಿಧಾನಗತಿಯಲ್ಲಿ ಸಾಗಿದೆ. ಇಲ್ಲಿಯವರೆಗೆ ಒಟ್ಟು 17,27,10,066 ಮಂದಿ ಕೋವಿಡ್ ವ್ಯಾಕ್ಸಿನ್ ಪಡೆದಿದ್ದಾರೆ.