ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ಸಚಿವ ವೈಎಸ್ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಾದ ವೈಎಸ್ ಭಾಸ್ಕರ್ ರೆಡ್ಡಿ ಹಾಗೂ ಉದಯಕುಮಾರ್ ರೆಡ್ಡಿ ಅವರನ್ನು ಇಂದಿನಿಂದ ಆರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿ ಸಿಬಿಐ ನ್ಯಾಯಾಲಯ ಆದೇಶ ಹೊರಡಿಸಿದೆ. ಮತ್ತೊಂದೆಡೆ, ಭಾಸ್ಕರ್ ರೆಡ್ಡಿ ಪುತ್ರ, ಕಡಪ ಸಂಸದ ಅವಿನಾಶ್ ರೆಡ್ಡಿ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: ವಿವೇಕ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಭಾಸ್ಕರ್ ರೆಡ್ಡಿ, ಉದಯಕುಮಾರ್ ಕೈವಾಡ: ಸಿಬಿಐ
ವಿವೇಕಾನಂದ ಹತ್ಯೆ ಪ್ರಕರಣದಲ್ಲಿ ಭಾಸ್ಕರ್ ರೆಡ್ಡಿ ಮತ್ತು ಉದಯ್ ಕುಮಾರ್ ಅವರನ್ನು 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಿಬಿಐ ಅರ್ಜಿ ಸಲ್ಲಿಸಿತ್ತು. ಮಂಗಳವಾರ ಈ ಅರ್ಜಿ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಸಿಹೆಚ್ ರಮೇಶ್ ಬಾಬು ಅವರು ಏಪ್ರಿಲ್ 19ರಿಂದ 24ರವರೆಗೆ ಆರು ದಿನಗಳ ಕಾಲ ಕಸ್ಟಡಿಗೆ ಆದೇಶಿಸಿದರು.
ಇತ್ತೀಚೆಗೆ ವಿವೇಕಾನಂದ ರೆಡ್ಡಿ ಪ್ರಕರಣದಲ್ಲಿ ಹತ್ಯೆಗೆ ಬಳಸಿದ ಆಯುಧದಿಂದ ಹಿಡಿದು ಹತ್ಯೆಗೆ ಬಳಸಿದ್ದ 40 ಕೋಟಿ ಹಣ ಎಲ್ಲಿಂದ ಬಂತು ಸೇರಿದಂತೆ ಈ ಹತ್ಯೆಗೆ ದೊಡ್ಡ ಸಂಚು ನಡೆದಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಇಬ್ಬರನ್ನು ಕಸ್ಟಡಿಗೆ ಒಪ್ಪಿಸುವಂತೆ ಸಲ್ಲಿಸಿದ್ದ ಸಿಬಿಐ ಮನವಿಗೆ ಆರೋಪಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗಾಗಲೇ ಹಲವು ಬಾರಿ ತನಿಖಾ ಸಂಸ್ಥೆಯ ವಿಚಾರಣೆಗೆ ಭಾಸ್ಕರ್ ರೆಡ್ಡಿ ಹಾಗೂ ಉದಯಕುಮಾರ್ ರೆಡ್ಡಿ ಹಾಜರಾಗಿದ್ದಾರೆ ಎಂದು ಹೇಳಿದರು. ಆಗ ಆರೋಪಿಗಳ ವಾದವನ್ನು ಪರಿಗಣಿಸಿ ಈ ಹಂತದಲ್ಲಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.
ಇದನ್ನೂ ಓದಿ: ಮಾಜಿ ಸಚಿವ ವಿವೇಕಾನಂದ ಹತ್ಯೆ ಕೇಸ್: ಸಂಸದ ಅವಿನಾಶ್ ರೆಡ್ಡಿ ತಂದೆ ಬಂಧಿಸಿದ ಸಿಬಿಐ
ಅಲ್ಲದೇ, ಈ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ತನಿಖೆಯನ್ನು ಮೊದಲು ಎಸ್‌ಐಟಿ (ವಿಶೇಷ ತನಿಖಾ ತಂಡ) ಪ್ರಾರಂಭಿಸಿತ್ತು. ನಂತರ ಸಿಬಿಐಗೆ ವರ್ಗಾಯಿಸಲಾಗಿತ್ತು. ಇತ್ತೀಚೆಗೆ ಸಿಬಿಐನ ತನಿಖಾ ತಂಡವೂ ಬದಲಾಗಿದೆ. ತನಿಖೆ ನಿರ್ಣಾಯಕ ಹಂತದಲ್ಲಿದೆ ಎಂದು ನ್ಯಾಯಾಧೀಶರು, ಆರೋಪಿಗಳನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಿದರು.
ಸಿಬಿಐಗೆ ಕೋರ್ಟ್ ಸೂಚನೆ: ಇದೇ ವೇಳೆ, ಏ.19ರಿಂದ 24ರವರೆಗೆ ಚಂಚಲಗೂಡ ಜೈಲಿನಿಂದ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಭಾಸ್ಕರ್ ರೆಡ್ಡಿ ಹಾಗೂ ಉದಯಕುಮಾರ್ ರೆಡ್ಡಿ ಅವರನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲು ಅವಕಾಶ ಇದೆ. ಸಿಬಿಐ ಕಚೇರಿಯಲ್ಲಿಯೇ ತನಿಖೆ ನಡೆಸಬೇಕು. ಆ ಸಮಯದಲ್ಲಿ ಅವರಿಗೆ ಊಟ, ಚಹಾ, ಟಿಫಿನ್ ಮತ್ತು ವಸತಿ ಒದಗಿಸಬೇಕು. ತನಿಖೆಯಲ್ಲಿ ಮೂರನೇ ದರ್ಜೆಯನ್ನು ಬಳಸಬಾರದು. ಆರೋಪಿಗಳ ಪರ ವಕೀಲರಿಗೆ ವಿಚಾರಣೆ ನಡೆಯುವ ಸ್ಥಳಕ್ಕೆ ಅವಕಾಶ ನೀಡಬೇಕು. ಆದರೆ, ಅವರನ್ನು ತನಿಖೆಯ ಸ್ಥಳದಿಂದ ದೂರ ಇರಿಸಬೇಕು. ಕೊನೆಯ ದಿನ ವೈದ್ಯಕೀಯ ಪರೀಕ್ಷೆ ನಡೆಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಕಸ್ಟಡಿ ಪೂರ್ಣಗೊಂಡ ಬಳಿಕ ವರದಿ ಸಲ್ಲಿಸುವಂತೆ ಸಿಬಿಐಗೆ ನ್ಯಾಯಾಲಯವು ಸೂಚಿಸಿತು.
ಪ್ರಕರಣದ ಹಿನ್ನೆಲೆ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈಎಸ್ ರಾಜಶೇಖರ್ ರೆಡ್ಡಿ ಅವರ ಸಹೋದರರಲ್ಲಿ ವಿವೇಕಾನಂದ ರೆಡ್ಡಿ ಒಬ್ಬರು. 2019ರಲ್ಲಿ ರಾಜ್ಯದ ವಿಧಾನಸಭೆ ಚುನಾವಣೆಗೆ ಕೆಲ ವಾರಗಳ ಮೊದಲು ಎಂದರೆ, ಮಾರ್ಚ್ 15ರಂದು ಕಡಪಾ ಜಿಲ್ಲೆಯ ಪುಲಿವೆಂದುಲದಲ್ಲಿರುವ ತಮ್ಮ ನಿವಾಸದಲ್ಲಿ ಕೊಲೆಯಾಗಿದ್ದಾರೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಭಾಸ್ಕರ್ ರೆಡ್ಡಿ ಕೂಡ ವೈಎಸ್ ರಾಜಶೇಖರ್ ರೆಡ್ಡಿ ಅವರ ಸಹೋದರರಾಗಿದ್ದಾರೆ. ರಾಜಕೀಯ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬ ಸಂಶಯವಿದೆ. ಅವರ ಭಾಸ್ಕರ್ ರೆಡ್ಡಿ ಮಗ ಅವಿನಾಶ್ ರೆಡ್ಡಿ ಸಂಸದರಾಗಿದ್ದಾರೆ. ವೈಎಸ್ ರಾಜಶೇಖರ್ ರೆಡ್ಡಿ ಅವರ ಪುತ್ರ ವೈಎಸ್ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾರೆ.
ಏಪ್ರಿಲ್ 16ರಂದು ಭಾಸ್ಕರ್ ರೆಡ್ಡಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಇದೇ ವೇಳೆ ಸಿಬಿಐ ಅಧಿಕಾರಿಗಳು ಪುಲಿವೆಂದುಲ ನಿವಾಸಕ್ಕೆ ತೆರಳಿದ್ದಾಗ ಬೆಂಬಲಿಗರು, ಕಾರ್ಯಕರ್ತರು ಮನೆಯ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಅಧಿಕಾರಿಗಳ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಿದ್ದರು. ಬಂಧನದ ನಂತರ ಪುಲಿವೆಂದುಲದಿಂದ ಹೈದರಾಬಾದ್‌ಗೆ ಭಾಸ್ಕರ್ ರೆಡ್ಡಿ ಅವರನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದರು.
ಇದನ್ನೂ ಓದಿ: ವಿವೇಕಾನಂದ ರೆಡ್ಡಿ ಹತ್ಯೆ ಕೇಸ್: ಅವಿನಾಶ್‌ಗೆ ಸಂಚು ಮೊದಲೇ ಗೊತ್ತಿತ್ತು- ಹೈಕೋರ್ಟ್‌ನಲ್ಲಿ ಸಿಬಿಐ ದಾವೆ