ನವದೆಹಲಿ: ಕಾರ್ಪೊರೇಟ್ ತೆರಿಗೆ ಕಡಿತವು ಆರ್ಥಿಕತೆಗೆ ಸಹಾಯ ಮಾಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ. ಹಣಕಾಸು ಮಸೂದೆ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವರು, ಈ ಹಣಕಾಸು ವರ್ಷದಲ್ಲಿ 7.3 ಲಕ್ಷ ಕೋಟಿ ರೂಪಾಯಿಗಳಷ್ಟು ಕಾರ್ಪೊರೇಟ್ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ಲೋಕಸಭೆಗೆ ತಿಳಿಸಿದರು. ಅಲ್ಲದೇ ಕಳೆದ ವರ್ಷ ಮತ್ತು ಈ ವರ್ಷ ಕೇಂದ್ರ ಸರ್ಕಾರ ತೆರಿಗೆಯನ್ನು ಹೆಚ್ಚಿಸಿಲ್ಲ ಎಂದು ಮಾಹಿತಿ ನೀಡಿದರು.
ಜರ್ಮನಿ, ಫ್ರಾನ್ಸ್, ಕೆನಡಾ, ಯುಕೆ ಸೇರಿದಂತೆ 32 ದೇಶಗಳು ತೆರಿಗೆಗಳನ್ನು ಹೆಚ್ಚಿಸಿವೆ ಎಂದು ಉಲ್ಲೇಖಿಸಿ, ಭಾರತ ಸರ್ಕಾರ ತೆರಿಗೆ ಹೆಚ್ಚಿಸಿಲ್ಲ ಎಂಬುದನ್ನು ಒತ್ತಿ ಹೇಳಿದರು. ಜೊತೆಗೆ ಈ ಬಜೆಟ್ ಸಾರ್ವಜನಿಕರಿಗೆ ಹೊರೆಯಾಗಿಲ್ಲ. ಹೆಚ್ಚಿನ ಬೆಳವಣಿಗೆ ದೃಷ್ಟಿಯಿಂದ ಕೇಂದ್ರವು ಬೃಹತ್ ಬಜೆಟ್ ಅನ್ನು ಮೀಸಲಿಟ್ಟಿದೆ ಎಂದು ತಿಳಿಸಿದರು. ಅಲ್ಲದೇ ಕೆಲವು ವರ್ಷಗಳ ಹಿಂದೆ ತೆರಿಗೆ ಪಾವತಿದಾರರ ಸಂಖ್ಯೆ 5 ಕೋಟಿಯಿಂದ 9.1 ಕೋಟಿಗೆ ಹೆಚ್ಚಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಹೆಲಿಕಾಪ್ಟರ್ ಖರೀದಿ, ಗುತ್ತಿಗೆಗಾಗಿ HAL- PHL ಮಧ್ಯೆ ಸಹಕಾರ ಒಪ್ಪಂದ
ಲೋಕಸಭೆಯು ಶುಕ್ರವಾರದದಂದು ಹಣಕಾಸು ಮಸೂದೆ ಅಂಗೀಕರಿಸಿದೆ. ಸೀತಾರಾಮನ್ ಅವರು ಮಂಡಿಸಿದ 39 ಅಧಿಕೃತ ತಿದ್ದುಪಡಿಗಳನ್ನು ಅಂಗೀಕರಿಸಿದ ನಂತರ ಮಸೂದೆಯನ್ನು ಧ್ವನಿ ಮತದ ಮೂಲಕ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಪ್ರತಿಪಕ್ಷಗಳು ಇದು ಶ್ರೀಮಂತರ ಪರ ಸರ್ಕಾರ, ಶ್ರೀಮಂತರಿಗೆ ತೆರಿಗೆ ಹಾಕದೇ ಎಲ್ಲ ಅನುಕೂಲ ಮಾಡಿಕೊಡುತ್ತಿದೆ. ಆದರೆ ಬಡವರ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಸದನದಲ್ಲೇ ಪ್ರತಿಪಕ್ಷಗಳ ಎಲ್ಲ ಆರೋಪಗಳಿಗೆ ಅಂಕಿ- ಸಂಖ್ಯೆಗಳ ಮೂಲಕ ಪ್ರತ್ಯುತ್ತರ ಕೊಟ್ಟಿದ್ದಾರೆ.